Published
11 hours agoon
By
Akkare News
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮಗ ನಿಶಾಂತ್ ಕುಮಾರ್ ಅವರು ಭಾನುವಾರ (ಮಾ.8) ಔಪಚಾರಿಕವಾಗಿ ಜೆಡಿಯು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಮೂಲಕ ಅಧಿಕೃತವಾಗಿ ರಾಜಕೀಯಕ್ಕೆ ಪಾದಾರ್ಪಾಣೆ ಮಾಡಿದ್ದಾರೆ.
ಸಿಎಂ ನಿತೀಶ್ ಕುಮಾರ್ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಮಗನ ನಿಶಾಂತ್ ಜೆಡಿಯು ಸೇರ್ಪಡೆಗೊಂಡಿರುವುದು ಗಮನಾರ್ಹ. ಇದರಿಂದ ನಿತೀಶ್ ಕುಮಾರ್ ರಾಜ್ಯಸಭೆಗೆ ಆಯ್ಕೆಯಾದರೆ, ರಾಜ್ಯ ಸರ್ಕಾರದಲ್ಲಿ ನಿಶಾಂತ್‌ಗೆ ಅವಕಾಶ ಸಿಗಲಿದೆಯೇ? ಎಂಬ ಚರ್ಚೆ ಶುರುವಾಗಿದೆ.
ಇಂಜಿನಿಯರಿಂಗ್ ಪದವೀದರರಾಗಿರುವ 40 ವರ್ಷದ ನಿಶಾಂತ್ ಕುಮಾರ್ ಪಾಟ್ನಾದ ಜೆಡಿಯು ಕೇಂದ್ರ ಕಚೇರಿಯಲ್ಲಿ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಸಂಜಯ್ ಜಾ ಅವರಿಂದ ಸದಸ್ಯತ್ವ ಸ್ವೀಕರಿಸಿದರು. ಈ ವೇಳೆ ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ ಮತ್ತು ಬಿಹಾರ ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಚೌಧರಿ ಸೇರಿದಂತೆ ಪಕ್ಷದ ಹಿರಿಯ ನಾಯಕರು ಉಪಸ್ಥಿತರಿದ್ದರು.
ನಿಶಾಂತ್ ಪಕ್ಷದ ಕಚೇರಿಗೆ ಆಗಮಿಸುತ್ತಿದ್ದಂತೆ, ಜೆಡಿಯು ಕಾರ್ಯಕರ್ತರು “ಯುವ ಸೋಚ್, ಮಜ್ಬೂತ್ ಸಂಕಲ್ಪ್” (ಯುವ ಚಿಂತನೆ, ದೃಢ ನಿರ್ಧಾರ) ಎಂಬ ಘೋಷಣೆಗಳನ್ನು ಕೂಗಿದರು. ಅವರ ಈ ಪ್ರವೇಶವು ಪಕ್ಷದೊಳಗೆ ಯುವಕೇಂದ್ರಿತ ಕಾರ್ಯಸೂಚಿಗಳಿಗೆ ಹೆಚ್ಚಿನ ಒತ್ತು ನೀಡಬಹುದು ಎಂಬ ನಿರೀಕ್ಷೆಗಳನ್ನು ಇದು ಪ್ರತಿಬಿಂಬಿಸಿತು ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಜೆಡಿಯು ಸೇರಿದ ನಂತರ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ನಿಶಾಂತ್, ನಮ್ಮ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಾಯಕರು ಮತ್ತು ಬೆಂಬಲಿಗರಿಗೆ ಧನ್ಯವಾದ ಅರ್ಪಿಸಿದರು ಎಂದು ವರದಿ ಉಲ್ಲೇಖಿಸಿದೆ.
“ನಾನು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನೀವೆಲ್ಲರೂ ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ನಾನು ಪ್ರಯತ್ನಿಸುತ್ತೇನೆ. ಕಳೆದ 20 ವರ್ಷಗಳಲ್ಲಿ ನನ್ನ ತಂದೆ ಮಾಡಿದ ಸಾಧನೆಗಳ ಬಗ್ಗೆ ನಾನು, ಇಡೀ ಬಿಹಾರ ಮತ್ತು ಇಡೀ ದೇಶ ಹೆಮ್ಮೆಪಡುತ್ತದೆ” ಎಂದು ಅವರು ಹೇಳಿದ್ದಾರೆ.
ರಾಜ್ಯದ ಅಭಿವೃದ್ಧಿಗೆ ಮುಖ್ಯಮಂತ್ರಿ ನೀಡಿದ ಕೊಡುಗೆಯನ್ನು ರಾಜ್ಯದ ಜನತೆ ಎಂದಿಗೂ ಮರೆಯುವುದಿಲ್ಲ” ಎಂದಿದ್ದಾರೆ.
ನಿತೀಶ್ ಕುಮಾರ್ ರಾಜ್ಯಸಭೆಗೆ ಹೋಗುವ ನಿರ್ಧಾರದ ಬಗ್ಗೆಯೂ ನಿಶಾಂತ್ ಪ್ರಸ್ತಾಪಿಸಿದ್ದು, “ನನ್ನ ತಂದೆಯವರು ರಾಜ್ಯಸಭೆಗೆ ಹೋಗಲು ನಿರ್ಧರಿಸಿದ್ದಾರೆ. ನಾವು ಅವರ ನಿರ್ಧಾರವನ್ನು ಗೌರವಿಸುತ್ತೇವೆ ಮತ್ತು ಅವರ ಮಾರ್ಗದರ್ಶನದಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ” ಎಂದು ಅವರು ತಿಳಿಸಿದ್ದಾರೆ.
ಮಗನ ಪಕ್ಷದ ಸೇರ್ಪಡೆ ಕಾರ್ಯಕ್ರಮಕ್ಕೆ ನಿತೀಶ್ ಕುಮಾರ್ ಹಾಜರಾಗದಿದ್ದರೂ, ನಿಶಾಂತ್ ಅವರ ಅಧಿಕೃತ ಸೇರ್ಪಡೆಯು ಜೆಡಿಯು ಪಾಲಿಗೆ ಒಂದು ಮಹತ್ವದ ಕ್ಷಣವೆಂದು ಪರಿಗಣಿಸಲಾಗಿದೆ. ರಾಜಕೀಯ ವಿಶ್ಲೇಷಕರು ಇದನ್ನು ಪಕ್ಷದಲ್ಲಿ ನಾಯಕತ್ವ ಬದಲಾವಣೆಯ ಸಂಭಾವ್ಯ ಆರಂಭವೆಂದು ಹೇಳಿದ್ದಾರೆ.