Published
5 hours agoon
By
Akkare News
ಭಾರತದಲ್ಲಿ ಮುಂಗಾರು ಮಳೆಯ ಕೊರತೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ದೇಶದ ಕೃಷಿ ವಲಯ ಹಾಗೂ ಜಲಮೂಲಗಳಿಗೆ ಭಾರಿ ಆತಂಕ ಎದುರಾಗಿದೆ.
ದೇಶಾದ್ಯಂತ ಮುಂಗಾರು ಮಾರುತಗಳ ಆರ್ಭಟ ಕ್ಷೀಣಿಸಿದ್ದು, ಮಳೆಯ ಕೊರತೆಯ ಪ್ರಮಾಣವು ಆಘಾತಕಾರಿ ರೀತಿಯಲ್ಲಿ ಶೇ. 42ಕ್ಕೆ ತಲುಪಿದೆ. ಜೂನ್ ತಿಂಗಳು ಮುಗಿಯುತ್ತ ಬಂದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ದೇಶದ ಪ್ರಮುಖ ಜಲಾಶಯಗಳು ಬತ್ತುತ್ತಿದ್ದು, ಕೃಷಿ ಚಟುವಟಿಕೆಗಳು ಸಂಪೂರ್ಣ ಕುಂಠಿತಗೊಂಡಿವೆ. ಮುಂದಿನ ದಿನಗಳಲ್ಲಿ ಈ ಕೊರತೆಯನ್ನು ಸರಿದೂಗಿಸುವುದು ಅತ್ಯಂತ ಸವಾಲಿನ ಕೆಲಸ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ.
ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲೇ ದೇಶವನ್ನು ಪ್ರವೇಶಿಸುವ ಮುಂಗಾರು ಮಾರುತಗಳು ಇಷ್ಟು ಹೊತ್ತಿಗಾಗಲೇ ಇಡೀ ದೇಶವನ್ನು ಆವರಿಸಬೇಕಿತ್ತು. ಆದರೆ, ಈ ಬಾರಿ ಆರಂಭಿಕ ಮುನ್ನಡೆಯ ನಂತರ ಮುಂಗಾರು ಮಾರುತಗಳ ಚಲನೆ ಮಂದಗತಿಯಾಗಿದೆ. ಹವಾಮಾನ ಇಲಾಖೆಯ (IMD) ತಾಜಾ ಅಂಕಿ-ಅಂಶಗಳ ಪ್ರಕಾರ, ದೇಶದ ಬಹುತೇಕ ರಾಜ್ಯಗಳಲ್ಲಿ ವಾಡಿಕೆಗಿಂತ ಭಾರಿ ಕಡಿಮೆ ಮಳೆಯಾಗಿದ್ದು, ಒಟ್ಟಾರೆ ಮಳೆ ಕೊರತೆಯ ಗ್ರಾಫ್ ಶೇ. 42ರಷ್ಟು ದಾಖಲಾಗಿದೆ.
ಜೂನ್ ತಿಂಗಳು ದೇಶದ ಮುಂಗಾರು ಹಂಗಾಮಿನ ಬಿತ್ತನೆಗೆ ಅತ್ಯಂತ ಪ್ರಮುಖವಾದ ಸಮಯವಾಗಿದೆ. ಲಕ್ಷಾಂತರ ಎಕರೆ ಕೃಷಿ ಭೂಮಿ ಮಳೆಯಿಲ್ಲದೆ ಒಣಗುತ್ತಿದ್ದು, ರೈತರು ಬಿತ್ತನೆ ಕಾರ್ಯವನ್ನು ಮುಂದೂಡುತ್ತಿದ್ದಾರೆ. ದೇಶದ ಪ್ರಮುಖ ನದಿಗಳು, ಕೆರೆಗಳು ಮತ್ತು ಜಲಾಶಯಗಳಲ್ಲಿ ನೀರಿನ ಮಟ್ಟ ಅಪಾಯಕಾರಿ ಮಟ್ಟಕ್ಕೆ ಕುಸಿದಿದೆ. ಇದು ಕೇವಲ ಕೃಷಿಗೆ ಮಾತ್ರವಲ್ಲದೆ ಕುಡಿಯುವ ನೀರಿಗೂ ತತ್ವಾರ ಸೃಷ್ಟಿಸುವ ಮುನ್ಸೂಚನೆ ನೀಡಿದೆ.