ಕೇರಳ ಅಗಸ್ಟ್ 01: ಕೇರಳಾದ್ಯಂತ ಸುರಿಯುತ್ತಿರುವ ನಿರಂತರ ಭಾರಿ ಮಳೆಯಿಂದಾಗಿ ಪ್ರವಾಹ ಹಾಗೂ ಭೂಕುಸಿತದ ಸರಣಿ ದುರಂತಗಳು ಮುಂದುವರಿದಿದ್ದು, ಶನಿವಾರ (ಆಗಸ್ಟ್ 1, 2026) ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಸಂಭವಿಸಿದ ಪ್ರತ್ಯೇಕ ಭೂಕುಸಿತ ಘಟನೆಗಳಲ್ಲಿ ಮೂವರು ಮೃತಪಟ್ಟಿದ್ದಾರೆ. ಹಲವರು ಮಣ್ಣಿನ ಅಡಿಯಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಇಡುಕ್ಕಿ, ಕೊಟ್ಟಾಯಂನಲ್ಲಿ ಸರಣಿ ದುರಂತ: ಇಡುಕ್ಕಿ ಜಿಲ್ಲೆಯ ಕುದಯತ್ತೂರು ಸಮೀಪದ ಆಡೂರ್‌ಮಾಲಾದಲ್ಲಿ ಶನಿವಾರ ನಸುಕಿನ ಜಾವ ಮನೆಗೆ ಮಣ್ಣಿನ ಕುಸಿತ ಅಪ್ಪಳಿಸಿ ಸುಮತಿ ಎಂಬ ಮಹಿಳೆ ಮೃತಪಟ್ಟಿದ್ದಾರೆ. ನೆರೆಹೊರೆಯವರು ಆಕೆಯ ಪತಿ ಹಾಗೂ ಮಗನನ್ನು ರಕ್ಷಿಸಿದ್ದು, ತೋಡುಪುಳದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೇ ರೀತಿ ಇಡುಕ್ಕಿಯ ವಗಮೋನ್‌ನಲ್ಲಿ ಸಂಭವಿಸಿದ ಮತ್ತೊಂದು ಭೂಕುಸಿತಕ್ಕೆ ಕೋಟಾಯಂನ ವೈಕೋಮ್ ಮೂಲದ ಪ್ರಭಾಕರನ್ ನಾಯರ್ ಬಲಿಯಾಗಿದ್ದಾರೆ. ಮತ್ತೊಂದೆಡೆ, ಕೊಟ್ಟಾಯಂ ಜಿಲ್ಲೆಯ ಪೂಂಜಾರ್‌ನ ಪಯ್ಯನಿತೋಟಂನಲ್ಲಿ ಭೂಕುಸಿತ ಉಂಟಾಗಿ ಜೋಸೆಫ್ ಎಂಬ ಯುವಕ ಮೃತಪಟ್ಟಿದ್ದು, ಆತನ ತಾಯಿಗಾಗಿ ಎನ್‌ಡಿಆರ್‌ಎಫ್ (NDRF) ಶೋಧ ಕಾರ್ಯಾಚರಣೆ ಮುಂದುವರಿಸಿದೆ.ಹೆದ್ದಾರಿ ಬಂದ್, ನದಿಗಳು ಉಕ್ಕಿ ಹರಿವು: ಪುಲ್ಲಕಾಯರ್ ಹಾಗೂ ಪಂಪಾ ನದಿಗಳಲ್ಲಿ ನೀರಿನ ಮಟ್ಟ ಹಠಾತ್ತನೆ ಏರಿಕೆಯಾಗಿದ್ದು, ಕೊಕ್ಕಾಯರ್‌ನ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ರಾಷ್ಟ್ರೀಯ ಹೆದ್ದಾರಿ 183ರ ಮೇಲೆ ನೀರು ನಿಂತು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಕಟ್ಟಪ್ಪನ-ವಝವಾರ ರಸ್ತೆಯಲ್ಲೂ ಭೂಕುಸಿತದಿಂದಾಗಿ ಸಂಚಾರ ಅಡಚಣೆಯಾಗಿದೆ. 8 ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಣೆ: ಪಥನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಸೇರಿದಂತೆ 8 ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ (IMD) ‘ರೆಡ್ ಅಲರ್ಟ್’ ಪ್ರಕಟಿಸಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಅಪಾಯಕಾರಿ ಪ್ರದೇಶದ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗುತ್ತಿದೆ