ಪೊಲೀಸ್ ಎನ್‌ಕೌಂಟರ್‌ನಲ್ಲಿ ದೀಪಕ್ ನಂದಲ್ ಗ್ಯಾಂಗ್‌ಗೆ ಸೇರಿದ ನಾಲ್ವರು ಸದಸ್ಯರು ಹತ್ಯೆಯಾಗಿದ್ದು, ಒರ್ವ ಸದಸ್ಯ ಗಾಯಗೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುರುಗ್ರಾಮದ ಸುಶಾಂತ್ ಲೋಕ್‌ನ ‘ಎ’ ಬ್ಲಾಕ್‌ನಲ್ಲಿ ಈ ಎನ್‌ಕೌಂಟರ್ ನಡೆದಿದೆ. ಗುಂಡಿನ ಚಕಮಕಿಯಲ್ಲಿ ಮೂವರು ಪೊಲೀಸ್ ಸಿಬ್ಬಂದಿ ಕೂಡ ಗಾಯಗೊಂಡಿದ್ದಾರೆ. ದೀಪಕ್ ನಂದಲ್ ಗ್ಯಾಂಗ್‌ನ ಐವರು ಸದಸ್ಯರು ಗುರುಗ್ರಾಮದಲ್ಲಿರುವ ಎಸ್‌ಜಿಟಿ ವಿಶ್ವವಿದ್ಯಾಲಯದ ಸಂಸ್ಥಾಪಕರ ಮಗ ವಿಶಾಲ್ ಬೆರ್ರಿ ಅವರನ್ನು ಅವರ ನಿವಾಸದಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿದ್ದರುಸ್ಕಾರ್ಪಿಯೊ ಕಾರಿನಲ್ಲಿ ಬಂದಿದ್ದ ಆರೋಪಿಗಳ ಚಲನವಲನಗಳ ಬಗ್ಗೆ ಅಪರಾಧ ವಿಭಾಗಕ್ಕೆ ಪೊಲೀಸ್ ನಿಯಂತ್ರಣ ಕೊಠಡಿಯಿಂದ ಮಾಹಿತಿ ಬಂದಿತ್ತು. ಅಪರಾಧ ವಿಭಾಗದ ತಂಡಗಳು ಸುಶಾಂತ್ ಲೋಕ್ ಪ್ರದೇಶಕ್ಕೆ ಬಂದಾಗ, ಅಪರಾಧಿಗಳು ಉದ್ಯಮಿಯ ಮನೆಯ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದ್ದರು ಎಂದು ಹೇಳಲಾಗಿದೆ. ತಕ್ಷಣ ಆರೋಪಿಗಳನ್ನು ಸುತ್ತುವರೆದ ಪೊಲೀಸರ ಮೇಲೂ ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ನಂತರ ದಾಳಿ ಪ್ರತಿದಾಳಿಯಲ್ಲಿ ಗ್ಯಾಂಗ್ ನಾಲ್ವರು ಸದಸ್ಯರು ಹತ್ಯೆಯಾಗಿದ್ದಾರೆ. ಮೂವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.