Connect with us

ಸ್ಥಳೀಯ

ಮಂಡ್ಯದಲ್ಲಿ ಕೊಲೆ ಪ್ರಕರಣ: ಆರೋಪಿ ವಿ ಎ ಜಯಚಂದ್ರ ಬೆಳ್ತಂಗಡಿಯಲ್ಲಿ ಸೇರೆ

Published

on

​ಆರೋಪಿ ಜಯಚಂದ್ರ ಜೂ.22ರ ಸೋಮವಾರದಿಂದ ಕೇಂದ್ರಸ್ಥಾನದಲ್ಲಿ ಇರದೆ ಅನಧಿಕೃತ ಗೈರು ಆಗಿರುವ ಕುರಿತು ಕಂದಾಯ ನಿರೀಕ್ಷಕ ಚಂದ್ರನಾಯ್ಕ ಅವರು ಪುತ್ತೂರು ತಹಶೀಲ್ದಾರರಿಗೆ ವರದಿ ನೀಡಿದ್ದಾರೆ.

ಪುತ್ತೂರು:ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಭಾರತೀನಗರ ಸಮೀಪದ ಶೆಟ್ಟಹಳ್ಳಿ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಬೆಳ್ತಂಗಡಿಯಲ್ಲಿ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಮದ್ದೂರಿನ ಭಾರತೀನಗರ ಸಮೀಪ ಶೆಟ್ಟಿ ಹಳ್ಳಿಯ ಗಣೇಶ್ (೪೧ವ.)ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಆರೋಪದಲ್ಲಿ, ಕೆಮ್ಮಿಂಜೆ ಗ್ರಾಮ ಆಡಳಿತಾಧಿಕಾರಿಯಾಗಿದ್ದ ಮಂಡ್ಯ ಮದ್ದೂರು ತಾಲೂಕು ಶೆಟ್ಟಹಳ್ಳಿ ಗ್ರಾಮದ ನಿವಾಸಿ ಜಯಚಂದ್ರ ಎಂಬಾತನ ಮೇಲೆ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ಘಟನೆ ಬಳಿಕ ಆರೋಪಿ ಜಯಚಂದ್ರ ತಲೆಮರೆಸಿಕೊಂಡಿದ್ದ.

ಮಂಡ್ಯದ ಎಸ್.ಪಿ ಶೋಭಾರಾಣಿ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್ ಅನಿಲ್ ಅವರ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಗಣೇಶ್ ಅವರ ಸಾವಿನ ಬಳಿಕ ಅಲ್ಲಿಂದ ಪರಾರಿಯಾಗಿದ್ದ ಆರೋಪಿ ಜಯಚಂದ್ರ, ಈ ಹಿಂದೆ ತಾನು ಕರ್ತವ್ಯ ನಿರ್ವಹಿಸಿದ್ದ ಬೆಳ್ತಂಗಡಿಯಲ್ಲಿ ರೂಮ್ ಒಂದನ್ನು ಬಾಡಿಗೆಗೆ ಪಡೆದು ತಂಗಿದ್ದ.ಈ ಮಾಹಿತಿಯರಿತ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.ಬಂಧಿತ ಆರೋಪಿಯನ್ನು ಜೂ.೨೫ರಂದು ಬೆಳಿಗ್ಗೆ ಭಾರತಿನಿಗರ ಶೆಟ್ಟಿಹಳ್ಳಿ ಘಟನಾಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿ ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಘಟನೆಯ ವಿವರ: ಜೂ.22ರಂದು ರಾತ್ರಿ ವೇಳೆ ಗಣೇಶ್ ಅವರು ತನ್ನ ಮನೆಯ ಸಮೀಪದ ಅಂಗಡಿಯೊಂದರ ಬಳಿ ಕುಳಿತಿದ್ದ ವೇಳೆ ಅಲ್ಲಿಗೆ ಬಂದ ಜಯಚಂದ್ರ ಗ್ರಾಮಸ್ಥರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದುದನ್ನು ಗಮನಿಸಿ,ಸಾರ್ವಜನಿಕರನ್ನು ಬೈಯ್ಯದಂತೆ ಆತನಿಗೆ ಬುದ್ಧಿವಾದ ಹೇಳಿದ್ದರು.ಇದರಿಂದ ಆಕ್ರೋಶಗೊಂಡ ಜಯಚಂದ್ರ ಏಕಾಏಕಿ ಗಣೇಶ್ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದ.ಬಳಿಕ ಗ್ರಾಮಸ್ಥರು ಅಡ್ಡಬಂದು ಅವರಿಬ್ಬರನ್ನೂ ಸಮಾಧಾನಪಡಿಸಿ ಮನೆಗಳಿಗೆ ತೆರಳುವಂತೆ ಹೇಳಿ ಅಲ್ಲಿಂದ ಕಳುಹಿಸಿದ್ದರು.ಬಳಿಕ,ಏನೂ ಆಗಿಲ್ಲವೆಂಬಂತೆ ವರ್ತಿಸಿದ್ದ ಜಯಚಂದ್ರ ಅಲ್ಲಿ ಗಣೇಶ್ ಅವರನ್ನು ತಬ್ಬಿಕೊಂಡು ಅಲ್ಲಿಂದ ಮನೆಗೆ ಕರೆದುಕೊಂಡು ಹೋಗಿ ಮನೆಯ ಕೋಣೆಗೆ ಚಿಲಕ ಹಾಕಿ ಮರದ ಕಟ್ಟಿಗೆಯಿಂದ ಮನಬಂದಂತೆ ಹಲ್ಲೆ ನಡೆಸಿದ್ದರಿಂದ ಗಂಭೀರವಾಗಿ ಗಾಯಗೊಂಡ ಗಣೇಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಮತ್ತೆ ಮನೆಗೆ ಕರೆತರಲಾಗಿತ್ತು.ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಗಣೇಶ್ ಅವರು ಜೂ.೨೩ರಂದು ಬೆಳಗಿನ ಜಾವ ಮೃತಪಟ್ಟಿದ್ದರು.ಪೊಲೀಸರು ಜಯಚಂದ್ರ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು.
ಬಾರ್ಯ, ತೆಕ್ಕಾರು, ಪುತ್ತಿಲ ಹಾಗೂ ತಾಲೂಕು ಕಚೇರಿಯಲ್ಲಿ ಅಕ್ರಮ-ಸಕ್ರಮ ವಿಷಯ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸಿದ್ದ ಜಯಚಂದ್ರ ಎರಡು ವರ್ಷದ ಹಿಂದೆ ಪುತ್ತೂರಿಗೆ ವರ್ಗಾವಣೆಗೊಂಡಿದ್ದರು.ಬೆಳ್ತಂಗಡಿಯಲ್ಲಿ ಕಾರ್ಯನಿರ್ವಹಿಸುವ ವೇಳೆ ಅಕ್ರಮ -ಸಕ್ರಮದಲ್ಲಿ ನಕಲಿ ಸಹಿ ಹಾಗೂ ನಕಲಿ ಪತ್ರ ಮಾಡಿದ ಆರೋಪದಡಿ ಅವರನ್ನು ಅಮಾನತುಗೊಳಿಸಿತ್ತು.

ಸುಳ್ಯದಲ್ಲೂ ಪ್ರಕರಣ: ಸುಳ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ಪಾನಮತ್ತನಾಗಿ ಜೊತೆಗಿದ್ದಾತನಿಗೆ ಜಾತಿ ನಿಂದನೆ ಮಾಡಿ,ಬೆದರಿಕೆಯೊಡ್ಡಿದ್ದ ಆರೋಪದಲ್ಲಿ ಆತನ ವಿರುದ್ಧ ಅಟ್ರಾಸಿಟಿ ಕೇಸು ದಾಖಲಾಗಿತ್ತು ಎಂದು ಬೆಳ್ತಂಗಡಿ ಸಿಐ ರವಿ ಬಿ.ಎಸ್.ಮಾಹಿತಿ ನೀಡಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version