Published
2 hours agoon
By
Akkare News
ನವದೆಹಲಿ: ಭರವಸೆಯ ವೇಗದ ಬೌಲರ್‌ಗಳಾದ ಭುವನೇಶ್ವರ್ ಕುಮಾರ್ ಹಾಗೂ ಜೋಶ್ ಹ್ಯಾಜಲ್‌ವುಡ್ ಅವರ ಮಾರಕ ದಾಳಿಯ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) 19ನೇ ಆವೃತ್ತಿ ಐಪಿಎಲ್‌ನ 39ನೇ ಪಂದ್ಯದಲ್ಲಿ 9 ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಭದ್ರ ಪಡಿಸಿಕೊಂಡಿದೆ.
ಈ ಲೀಗ್‌ನಲ್ಲಿ ಅಮೋಘ ಸಂಘಟಿತ ಆಟದ ಪ್ರದರ್ಶನ ನೀಡುತ್ತಿರುವ ಆರ್‌ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧವೂ ಅಬ್ಬರಿಸಿದೆ. ಲೀಗ್‌ನಲ್ಲಿ ಆಡಿದ 8 ಪಂದ್ಯಗಳಲ್ಲಿ 6 ಜಯ, 2 ಸೋಲು ಕಂಡಿರುವ ಆರ್‌ಸಿಬಿ 12 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಭಧ್ರ ಪಡಿಸಿಕೊಂಡಿದೆ. ಈ ವೇಳೆ ಬೆಂಗಳೂರು ತಂಡದ ರನ್ ರೇಟ್ 1.919 ಆಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಈ ಪಂದ್ಯದಲ್ಲಿ ಸೋಲುವ ಮೂಲಕ ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನಕ್ಕೆ ಕುಸಿದಿದೆ.
ಅಲ್ಪ ಮೊತ್ತವನ್ನು ಹಿಂಬಾಲಿಸಿದ ಆರ್‌ಸಿಬಿ ತಂಡದ ಆರಂಭಿಕರಾದ ಜಾಕೋಬ್ ಬೆಥೆಲ್ ಹಾಗೂ ವಿರಾಟ್ ಕೊಹ್ಲಿ ಜೋಡಿ ಮೊದಲ ವಿಕೆಟ್‌ಗೆ 26 ರನ್ ಸೇರಿಸಿತು. ಈ ವೇಳೆ ಜಾಕೋಬ್ ಬೆಥೆಲ್ 11 ಎಸೆತಗಳಲ್ಲಿ 20 ರನ್ ಸೇರಿಸಿ ಔಟ್ ಆದರು.
‘ಪಡಿಕ್ಕಲ್ ಸ್ಫೋಟಕ ಆಟ ಬೆಥೆಲ್ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ದೇವದತ್ ಪಡಿಕ್ಕಲ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇವರು 13 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸಹಾಯದಿಂದ ಅಜೇಯ 34 ರನ್ ಸಿಡಿಸಿದರು. ಈ ವೇಳೆ ಇವರ ಸ್ಟ್ರೈಕ್ ರೇಟ್ 261 ಆಗಿತ್ತು. ಆರ್‌ಸಿಬಿ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅಜೇಯ 23 ರನ್ ಸಿಡಿಸಿ ಜಯದಲ್ಲಿ ಮಿಂಚಿದರು. ಆರ್‌ಸಿಬಿ 6.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 77 ರನ್ ಸೇರಿಸಿತು. ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದರು. ಅಲ್ಲದೆ ಐಪಿಎಲ್‌ನಲ್ಲಿ 9000 ರನ್ ಮೈಲಿಗಲ್ಲು ತಲುಪಿದರು. ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆ ಸಹ ಇವರದ್ದಾಯಿತು.
ಪವರ್ ಫುಲ್ ಬೌಲಿಂಗ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಆರ್‌ಸಿಬಿ ನಿರ್ಧಾರವನ್ನು ವೇಗಿಗಳು ಸಮರ್ಥಿಸಿಕೊಂಡರು. ಕಳೆದ ಪಂದ್ಯದಲ್ಲಿ 264 ರನ್ ಬಾರಿಸಿದ್ದ ಡೆಲ್ಲಿ ಬ್ಯಾಟರ್‌ಗಳು ಸೋಮವಾರ ನಡೆದ ಪಂದ್ಯದ ಪವರ್‌ಪ್ಲೇನಲ್ಲಿ ನೆಲಕಚ್ಚಿ ನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಮೊದಲ 6 ಓವರ್‌ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟರ್‌ಗಳಿಗೆ ಭುವಿ ಮತ್ತು ಹ್ಯಾಜಲ್‌ವುಡ್ ತಲಾ 3 ವಿಕೆಟ್ ಕಬಳಿಸುವ ಮಿಂಚಿದರು. ಪದಾರ್ಪಣ ಪಂದ್ಯವನ್ನು ಆಡಿದ ಸಾಹಿಲ್ ಪರಾಕ್ ಹಾಗೂ ಸ್ಟಾರ್ ಆಟಗಾರ ಕೆ.ಎಲ್. ರಾಹುಲ್ ರನ್ ಕಲೆ ಹಾಕುವಲ್ಲಿ ಎಡವಿದರು. ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್‌ಗಳು ಒಂದಂಕಿ ದಾಟಲು ವಿಫಲರಾದರು.
ಡೆಲ್ಲಿ ಪರ ಅಭಿಷೇಕ್ ಪೊರೆಲ್ (30), ಡೇವಿಡ್ ಮಿಲ್ಲರ್ (19) ಮತ್ತು ಕೈಲ್ ಜೇಮಿಸನ್ (12) ಮಾತ್ರ ಡೆಲ್ಲಿ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಅಂತಿಮವಾಗಿ ಡೆಲ್ಲಿ 16.3 ಓವರ್‌ಗಳಲ್ಲಿ 75 ರನ್‌ಗಳಿಗೆ ಆಲೌಟ್ ಆಯಿತು. ಆರ್‌ಸಿಬಿ ಬೌಲರ್‌ಗಳು ಒಟ್ಟು 60 ಡಾಟ್ ಬಾಲ್‌ಗಳನ್ನು ಎಸೆಯುವ ಮೂಲಕ ದಾಖಲೆ ಬರೆದರು. ಹ್ಯಾಜಲ್‌ವುಡ್ 12 ರನ್‌ಗೆ 4 ವಿಕೆಟ್ ಪಡೆದರೆ, ಭುವನೇಶ್ವರ್ 3 ಓವರ್‌ಗಳಲ್ಲಿ ಕೇವಲ 5 ರನ್ ನೀಡಿ 3 ವಿಕೆಟ್ ಕಬಳಿಸಿದರು. ರಸಿಕ್ ಸಲಾಂ, ಸುಯಶ್ ಶರ್ಮಾ ಮತ್ತು ಕೃನಾಲ್ ಪಾಂಡ್ಯ ತಲಾ ಒಂದು ವಿಕೆಟ್ ಹಂಚಿಕೊಂಡರು.