Connect with us

ಕ್ರೀಡೆ

ಚಾಂಪಿಯನ್ಸ್ ಟ್ರೋಫಿಯನ್ನೇ ಕದ್ದೊಯ್ದ ಪಿಸಿಬಿ ಮುಖ್ಯಸ್ಥ: ‘ಐಸಿಸಿ’ಗೆ ದೂರು ನೀಡಲು BCCI ಸಿದ್ಧತೆ !

Published

on

ದುಬೈ: ಏಷ್ಯಾಕಪ್‌ 2025 ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಟೀಂ ಇಂಡಿಯಾ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ, ದಾಖಲೆಯ 9ನೇ ಬಾರಿಗೆ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಆದರೆ, ಈ ಐತಿಹಾಸಿಕ ಗೆಲುವಿನ ಬಳಿಕ ನಡೆದ ಬಹುಮಾನ ವಿತರಣಾ ಸಮಾರಂಭವು ಭಾರೀ ಹೈಡ್ರಾಮಾಗೆ ಸಾಕ್ಷಿಯಾಯಿತು. ಭಾರತೀಯ ಕ್ರಿಕೆಟ್‌ ತಂಡದ ದಿಟ್ಟ ನಿರ್ಧಾರಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಶುರುವಾಗಿದ್ದು, ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿದೆ.

ಪಾಕ್ ಅಧ್ಯಕ್ಷರಿಂದ ಟ್ರೋಫಿ ಸ್ವೀಕರಿಸಲು ಭಾರತದ ನಿರಾಕರಣೆ!

ಗೆಲುವಿನ ನಂತರ ಪ್ರಶಸ್ತಿ ಸ್ವೀಕಾರ ಸಮಾರಂಭದಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆಯಿತು. ಏಷ್ಯಾ ಕ್ರಿಕೆಟ್‌ ಮಂಡಳಿ (ACC) ಅಧ್ಯಕ್ಷರೂ ಹಾಗೂ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (PCB) ಅಧ್ಯಕ್ಷರೂ ಆಗಿರುವ, ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವರಾದ ಮೊಹ್ಸಿನ್‌ ನಖ್ವಿ ಅವರಿಂದ ಏಷ್ಯಾಕಪ್‌ ಟ್ರೋಫಿಯನ್ನು ಸ್ವೀಕರಿಸಲು ಭಾರತ ತಂಡ  ನಿರಾಕರಿಸಿತು!

ಮೊಹ್ಸಿನ್ ನಖ್ವಿ ಮತ್ತು ಇತರ ಗಣ್ಯರು ಟ್ರೋಫಿ ಹಿಡಿದು ವೇದಿಕೆಯ ಮೇಲೆ ಸಿದ್ಧರಾಗಿದ್ದರೂ, ಭಾರತೀಯ ಆಟಗಾರರು ಸುಮಾರು 15-20 ಅಡಿ ದೂರದಲ್ಲಿ ನಿಂತು ಪ್ರತಿಭಟನೆ ವ್ಯಕ್ತಪಡಿಸಿದರು. ಇತ್ತ, ಸೋಲಿನಿಂದ ಕಂಗೆಟ್ಟಿದ್ದ ಪಾಕಿಸ್ತಾನಿ ಆಟಗಾರರು ತಮ್ಮ ಡ್ರೆಸ್ಸಿಂಗ್‌ ರೂಮ್‌ನಿಂದ ಹೊರಬರಲೇ ಇಲ್ಲ. ಈ ಗೊಂದಲದ ನಡುವೆ, ಒಂದು ಹಂತದಲ್ಲಿ ಪ್ರಶಸ್ತಿ ವಿತರಣಾ ಸಮಾರಂಭ ನಡೆಯುವುದೇ ಅನುಮಾನವಾಗಿ, ಟ್ರೋಫಿಯನ್ನು ಮೈದಾನದಿಂದ ಹೊರಕ್ಕೆ ಕೊಂಡೊಯ್ಯುವ ಪರಿಸ್ಥಿತಿ ಬಂದಿತ್ತು.

ಪಂದ್ಯ ಮುಗಿದ ಸುಮಾರು 55 ನಿಮಿಷಗಳ ವಿಳಂಬದ ನಂತರ ಸಮಾರಂಭವು ಮರು ಆರಂಭವಾದರೂ, ಭಾರತ ತನ್ನ ನಿರ್ಧಾರಕ್ಕೆ ಬದ್ಧವಾಗಿತ್ತು. ಭಾರತ ತಂಡದ ಆಟಗಾರರು ಪಂದ್ಯಶ್ರೇಷ್ಠ, ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ಇತರ ಗಣ್ಯರಿಂದ ಸ್ವೀಕರಿಸಿದರೂ, ಮೊಹ್ಸಿನ್‌ ನಖ್ವಿಯವರಿಂದ ಪ್ರಮುಖ ಟ್ರೋಫಿ ಸ್ವೀಕರಿಸಲಿಲ್ಲ. “ಭಾರತ ತಂಡ ಪ್ರಶಸ್ತಿ ಸ್ವೀಕರಿಸುವುದಿಲ್ಲ ಎಂದು ACC ಮಾಹಿತಿ ನೀಡಿದೆ” ಎಂದು ನಿರೂಪಕ ಸೈಮನ್‌ ಡೂಲ್‌ ಘೋಷಿಸುತ್ತಿದ್ದಂತೆ ಸಮಾರಂಭವು ಅಂತ್ಯಗೊಂಡಿತು. ಬಳಿಕ ನಮ್ಮ ಹೆಮ್ಮೆಯ ಆಟಗಾರರು ಅಲ್ಲಿಯೇ ನಿಂತು ‘ಅಣಕು ಟ್ರೋಫಿ’ ಎತ್ತಿ ಹಿಡಿದು ಸಂಭ್ರಮಿಸಿದರು.

ಪಾಕ್‌ ನಾಯಕನ ಉದ್ಧಟತನ ಮತ್ತು ಭಾರತೀಯ ಆಟಗಾರರ ಗಟ್ಟಿತನ!

ಭಾರತದ ಈ ಪ್ರತಿರೋಧಕ್ಕೆ ಸಿಟ್ಟಿಗೆದ್ದ ಪಾಕಿಸ್ತಾನದ ನಾಯಕ ಸಲ್ಮಾನ್‌ ಅಲಿ ಅಘಾ ತಮ್ಮ ಉದ್ಧಟತನವನ್ನು ಪ್ರದರ್ಶಿಸಿದರು. ರನ್ನರ್‌-ಅಪ್ ಬಹುಮಾನ ಸ್ವೀಕರಿಸಲು ಬಂದ ಪಾಕಿಸ್ತಾನಿ ಆಟಗಾರರು ಬಾಂಗ್ಲಾ ಕ್ರಿಕೆಟ್‌ ಮಂಡಳಿ ಮುಖ್ಯಸ್ಥರಿಂದ ಬಹುಮಾನ ಪಡೆದರು. ಆದರೆ, ಕೊನೆಯಲ್ಲಿ ಅಘಾ ಅವರು ತಮ್ಮ ಚೆಕ್ ಅನ್ನು ಸ್ವೀಕರಿಸಿ, ಅದನ್ನು ವೇದಿಕೆಯ ಮೇಲೆಯೇ ಎಸೆದು ಹೊರ ನಡೆದಿದ್ದು, ಅವರ ಕ್ರೀಡಾ ಸ್ಫೂರ್ತಿಯ ಕೊರತೆಯನ್ನು ಎತ್ತಿ ತೋರಿಸಿತು.

ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥರು ಪಾಕಿಸ್ತಾನ ಸರ್ಕಾರದ ಪ್ರಮುಖ ಸಚಿವರಾಗಿರುವ ಕಾರಣ, ಸೂಕ್ಷ್ಮ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಟ್ರೋಫಿ ಸ್ವೀಕರಿಸಲು ಭಾರತೀಯ ಆಟಗಾರರು ನಿರ್ಧರಿಸಿರಲಿಲ್ಲ ಎನ್ನಲಾಗಿದೆ. ಭಾರತೀಯ ಕ್ರಿಕೆಟ್‌ ಮಂಡಳಿಯು (BCCI) ಈ ಕುರಿತು ಗಂಭೀರವಾಗಿ ಪ್ರತಿಭಟಿಸಿದ್ದು, “ಟ್ರೋಫಿಯನ್ನು ಕೊಂಡುಹೋದ ACC ಮುಖ್ಯಸ್ಥರ ನಡೆ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿದೆ” ಎಂದು ತೀಕ್ಷ್ಣವಾಗಿ ಖಂಡಿಸಿದೆ.

ಭಾರತ ತಂಡದ ಈ ದಿಟ್ಟ ನಡೆ ಕೇವಲ ಗೆಲುವಿನ ಸಂಭ್ರಮ ಮಾತ್ರವಲ್ಲ, ಅಂತರರಾಷ್ಟ್ರೀಯ ವೇದಿಕೆಯಲ್ಲಿ ದೇಶದ ಘನತೆ ಮತ್ತು ಸ್ವಾಭಿಮಾನವನ್ನು ಎತ್ತಿ ಹಿಡಿದ ಸಂದೇಶವಾಗಿದೆ. ನಮ್ಮ ವೀರ ಕ್ರೀಡಾಪಟುಗಳು ಆಟದ ಮೈದಾನದಲ್ಲಿ ಮಾತ್ರವಲ್ಲ, ತಮ್ಮ ತತ್ವ ಮತ್ತು ನಿಲುವುಗಳಲ್ಲಿಯೂ ಎಷ್ಟೊಂದು ಗಟ್ಟಿಯಾಗಿದ್ದಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ!

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version