ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಚುನಾವಣೆ

ವಾಯಾನಾಡ್ : ವಯನಾಡಿನಲ್ಲಿ ಗೆಲುವು, ಪ್ರಿಯಾಂಕಾ ಗಾಂಧಿಗೆ ಸಿಹಿ ತಿನ್ನಿಸಿದ ಖರ್ಗೆ

Published

on

ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಅವರಿಂದ ತೆರವಾಗಿದ್ದ ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಸಹೋದರಿ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದರ ಬೆನ್ನಲ್ಲೇ ಪ್ರಿಯಾಂಕಾ ಗಾಂಧಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಸಿಹಿ ತಿನ್ನಿಸಿ ಅಭಿನಂದಿಸಿದ್ದಾರೆ.

ನವದೆಹಲಿಯ ಕಚೇರಿಯಲ್ಲಿ ಪ್ರಿಯಾಂಕಾ ಗಾಂಧಿ ಅವರಿಗೆ ಖರ್ಗೆ ಸಿಹಿ ತಿನ್ನಿಸಿ, ಶಾಲು ಹೊದಿಸಿ ಗೆಲುವಿಗೆ ಅಭಿನಂದಿಸಿದರು. ಕೇರಳದ ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಅವರು 4 ಲಕ್ಷಕ್ಕೂ ಹೆಚ್ಚು ಮತಗಳ ಮುನ್ನಡೆ ಸಾಧಿಸಿ ಜಯಭೇರಿ ಬಾರಿಸಿದ್ದಾರೆ. ಇದಕ್ಕಾಗಿ ಅವರು ಕ್ಷೇತ್ರದ ಜನತೆ ಹಾಗೂ ರಾಹುಲ್‌ ಗಾಂಧಿ ಅವರಿಗೆ ವಿಶೇಷ ಧನ್ಯವಾದಗಳನ್ನು ತಿಳಿಸಿದ್ದಾರೆ.

ವಯನಾಡ್ ಜನರು ನನ್ನನ್ನು ಗೆಲ್ಲಿಸಿದ ರೀತಿಗೆ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಅವರು ಸಾಕಷ್ಟು ಪ್ರೀತಿಯನ್ನು ನೀಡಿದ್ದಾರೆ. ನನ್ನ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿಭಾಯಿಸುತ್ತೇನೆ ಎಂದು ಅವರಿಗೆ ಭರವಸೆ ನೀಡಲು ಬಯಸುತ್ತೇನೆ. ನಾನು ಅವರ ಧ್ವನಿಯಾಗುತ್ತೇನೆ ಮತ್ತು ಅವರಿಗಾಗಿ ಹೋರಾಡುತ್ತೇನೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಇದೊಂದು ದೊಡ್ಡ ಜವಾಬ್ದಾರಿ, ಅದನ್ನು ಪೂರೈಸುವುದು ನನ್ನ ಕರ್ತವ್ಯ. ವಯನಾಡ್‌ ಜನರ ಸಮಸ್ಯೆಗಳಿಗೆ ಹೋರಾಟ ನಡೆಸುತ್ತೇನೆ. ಅಧಿವೇಶನ ಆರಂಭವಾಗಲಿ, ನಾನು ಭಾಗವಹಿಸುತ್ತೇನೆ. ನಾನು ಮಹಿಳೆಯರಿಗಾಗಿ ಮಾತನಾಡುತ್ತಿದ್ದೇನೆ. ನನ್ನ ತಿಳುವಳಿಕೆಯಂತೆ ಮಹಿಳೆಯರು ಮುಂದೆ ಬರಬೇಕು ಮತ್ತು ರಾಜಕೀಯಕ್ಕೆ ಸೇರಬೇಕು. ಅವರಿಗೆ ಅಧಿಕಾರ ನೀಡಬೇಕು ಎಂದು ಪ್ರಿಯಾಂಕಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

 

ಸಿಎಂ ಸಿದ್ದರಾಮಯ್ಯ ಅಭಿನಂದನೆ: ವಯನಾಡ್‌ನಲ್ಲಿ 4 ಲಕ್ಷಕ್ಕಿಂತ ಅಧಿಕ ಮತಗಳ ಅಂತರದಿಂದ ಜಯಗಳಿಸಿರುವ ಪ್ರಿಯಾಂಕ ಗಾಂಧಿಯವರಿಗೆ ಮತ್ತು ಕೇರಳ ಜನತೆಗೆ ಅಭಿನಂದನೆಗಳು. ಜಾರ್ಖಂಡ್‌ನಲ್ಲಿ ಮುಖ್ಯಮಂತ್ರಿ ಸುರೇನ್ ಅವರನ್ನು ಇ.ಡಿ ಯವರು ಜೈಲಿಗೆ ಕಳುಹಿಸಿದ್ದರು. ಬಿಜೆಪಿಯವರು ಸುಳ್ಳು ಕೇಸಲ್ಲಿ ಮುಖ್ಯಮಂತ್ರಿಯವರನ್ನು ಜೈಲಿಗೆ ಕಳುಹಿಸಿದರೂ ಜನತಾ ನ್ಯಾಯಾಲಯದಲ್ಲಿ ಜನ ಅವರ ಪರವಾಗಿ ತೀರ್ಪು ಕೊಟ್ಟಿದ್ದಾರೆ. ಜಾರ್ಖಂಡ್ ಜನರನ್ನು ಅಭಿನಂದಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಪಕ್ಷದ ಅಧ್ಯಕ್ಷರು, ಮಂತ್ರಿಗಳು, ಸ್ಥಳೀಯ ಮುಖಂಡರು, ಕಾರ್ಯಕರ್ತರು ಎಲ್ಲರ ಶ್ರಮಕ್ಕೆ ಸಾರ್ಥಕತೆ ಸಿಕ್ಕಿದೆ.

 

ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಮತನೀಡಿ, ಆಶೀರ್ವದಿಸಿದ ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣದ ಮತದಾರರಿಗೆ ನನ್ನ ಪ್ರೀತಿಪೂರ್ವಕ ಧನ್ಯವಾದಗಳು. ಈ ಮೂರೂ ಕ್ಷೇತ್ರಗಳಲ್ಲಿ ಭರ್ಜರಿ ಜಯ ದಾಖಲಿಸಿ, ವಿಧಾನಸಭೆಗೆ ಪ್ರವೇಶಿಸಿರುವ ನಮ್ಮ ಅಭ್ಯರ್ಥಿಗಳಾದ ಯಾಸಿರ್‌ ಅಹ್ಮದ್‌ ಖಾನ್‌ ಪಠಾಣ್‌, ಅನ್ನಪೂರ್ಣ ತುಕಾರಾಮ್‌ ಹಾಗೂ ಸಿ.ಪಿ. ಯೋಗೇಶ್ವರ್‌ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದಿದ್ದಾರೆ.

ವಿಪಕ್ಷಗಳ ನಿರಂತರ ಅಪಪ್ರಚಾರ, ಸುಳ್ಳು ಆರೋಪಗಳನ್ನು ಮೆಟ್ಟಿನಿಂತು ನಾವು ಸಾಧಿಸಿರುವ ಈ ಗೆಲುವು ದಿಗ್ವಿಜಯವಾಗಿ ಕಾಣುತ್ತಿದೆ. ಈ ಗೆಲುವಿನ ಹಿಂದಿರುವ ನಮ್ಮ ಕಾರ್ಯಕರ್ತರು ಮತ್ತು ಮುಖಂಡರ ಅಪಾರ ಶ್ರಮವನ್ನು ಇದೇ ವೇಳೆ ನೆನೆಯುತ್ತೇನೆ. ಈ ಗೆಲುವು ನಮ್ಮ ಸರ್ಕಾರದ ಮೇಲಿನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಜನರಿಗಾಗಿ ದುಡಿಯುವ ನಮ್ಮ ಸಂಕಲ್ಪಕ್ಕೆ ಚುನಾವಣಾ ಫಲಿತಾಂಶ ಇನ್ನಷ್ಟು ಬಲ ತುಂಬಿದೆ. ತಮ್ಮೆಲ್ಲರಿಗೂ ಮತ್ತೊಮ್ಮೆ ಧನ್ಯವಾದಗಳು ಎಂದು ಸಿದ್ದರಾಮಯ್ಯ ಟ್ವೀಟ್‌ ಮಾಡಿದ್ದಾರೆ.

 

ಡಿಸಿಎಂ ಡಿ.ಕೆ.ಶಿವಕುಮಾರ್‌ ಕೂಡ ಪ್ರಿಯಾಂಕಾ ಗಾಂಧಿ ಅವರನ್ನು ಅಭಿನಂದಿಸಿದ್ದಾರೆ. ವಯನಾಡ್ ಯಾವಾಗಲೂ ಕಾಂಗ್ರೆಸ್ ಪಕ್ಷದ ದೃಷ್ಟಿಯೊಂದಿಗೆ ಪ್ರಗತಿ, ಸ್ಥಿರತೆ ಮತ್ತು ಅಭಿವೃದ್ಧಿಯನ್ನು ಆರಿಸಿಕೊಂಡಿದೆ. ಈ ಬಾರಿ ಅದು ಕಾಂಗ್ರೆಸ್‌ನೊಂದಿಗೆ ಸಮೃದ್ಧಿಯನ್ನು ತರಲು ಅಚಲವಾಗಿದೆ ಎಂದು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದಿದ್ದಾರೆ. ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಂಸತ್ತಿನಲ್ಲಿ ವಯನಾಡ್ ಜನತೆಗೆ ನಿರ್ಭೀತ ಧ್ವನಿಯಾಗಲಿದ್ದಾರೆ ಮತ್ತು ಅವರನ್ನು ಅತ್ಯಂತ ಸಂಕಲ್ಪ ಮತ್ತು ಸಮರ್ಪಣೆಯೊಂದಿಗೆ ಪ್ರತಿನಿಧಿಸುತ್ತಾರೆ ಎಂದು ಅಭಿನಂದನೆಗಳನ್ನು ತಿಳಿಸಿದ್ದಾರೆ.

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version