Connect with us

ಕ್ರೈಮ್ ನ್ಯೂಸ್

ಮಂಗಳೂರು ಚಿನ್ನದ ವ್ಯಾಪಾರಿಯ ದರೋಡೆ ಕೇಸ್: ಕಾರು ಬಂಟ್ವಾಳದಲ್ಲಿ ಪತ್ತೆ; ಸೀಟ್ ಕವರ್ ಹರಿದು ಜಾಲಾಡಿದ್ದ ಖದೀಮರು!

Published

on

ಮಂಗಳೂರಿನಲ್ಲಿ ನಡೆದ ಚಿನ್ನದ ವ್ಯಾಪಾರಿಯ ದರೋಡೆ ಪ್ರಕರಣದ ತನಿಖೆ ನಡೆಯುತ್ತಿದ್ದು, ಈ ಕುರಿತು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದ್ದಾರೆ.

ಮಂಗಳೂರು: ನಗರದ ಬೈಕಂಪಾಡಿಯಲ್ಲಿ ಸೋಮವಾರ ತಡರಾತ್ರಿ ಮಹಾರಾಷ್ಟ್ರದ ಸಾಂಗ್ಲಿ ಮೂಲದ ಚಿನ್ನದ ವ್ಯಾಪಾರಿಯನ್ನು ಅಡ್ಡಗಟ್ಟಿ ಕಾರು ಹಾಗೂ ಚಿನ್ನ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ದರೋಡೆಕೋರರು ಅಪಹರಿಸಿದ್ದ ಬಿಳಿ ಬಣ್ಣದ ಕಾರು ಸದ್ಯ ಬಂಟ್ವಾಳ ಪೊಲೀಸ್ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಾಹಿತಿ ನೀಡಿದರು.

ಸೀಟ್ ಕವರ್ ಹರಿದು ಚಿನ್ನಕ್ಕಾಗಿ ಹುಡುಕಾಟ: ಬಂಟ್ವಾಳ ಪರಿಸರದಲ್ಲಿ ಅನಾಥವಾಗಿ ಬಿದ್ದಿದ್ದ ಕಾರನ್ನು ವಶಕ್ಕೆ ಪಡೆದಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ದರೋಡೆಕೋರರು ಕಾರಿನಲ್ಲಿದ್ದ ಸೀಟ್ ಕವರ್‌ಗಳನ್ನು ಹರಿದು ಹಾಕಿ, ಕಾರಿನ ಮೂಲೆ ಮೂಲೆಗಳನ್ನೂ ಸಂಪೂರ್ಣವಾಗಿ ಜಾಲಾಡಿರುವುದು ಗೊತ್ತಾಗಿದೆ. ಕಾರಿನ ಒಳಗೆ ಬೇರೆ ಯಾವುದಾದರೂ ಗುಪ್ತ ಜಾಗದಲ್ಲಿ ಚಿನ್ನ ಅಥವಾ ನಗದು ಇಡಲಾಗಿದೆಯೇ ಎಂದು ಹುಡುಕಲು ಖದೀಮರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ.

ಸಾಂಗ್ಲಿಯ ಚಿನ್ನದ ವ್ಯಾಪಾರಿ ವಿಕಾಸ್ (42) ಅವರು ಪತ್ನಿ ಮತ್ತು ಮಗುವಿನೊಂದಿಗೆ ಕೇರಳದ ಪಯ್ಯನೂರಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ನಡೆದಿತ್ತು. ಕಾರಿನಲ್ಲಿ ಹೊಂಚು ಹಾಕಿ ಬಂದಿದ್ದ 7 ಮಂದಿ ದರೋಡೆಕೋರರ ಗ್ಯಾಂಗ್, ವಿಕಾಸ್ ಅವರ ಕಾರನ್ನು ಸಿನಿಮೀಯ ಶೈಲಿಯಲ್ಲಿ ಅಡ್ಡಗಟ್ಟಿತ್ತು. ವ್ಯಾಪಾರಿಯನ್ನು ಸ್ಥಳದಲ್ಲೇ ಇಳಿಸಿ, ಅವರ ಪತ್ನಿ-ಮಗುವನ್ನು ಕುಳೂರು ಬಳಿ ಕಾರಿನಿಂದ ಕೆಳಗಿಳಿಸಿ, ಕಾರಿನಲ್ಲಿದ್ದ 180 ಗ್ರಾಂ ಚಿನ್ನದ ಬ್ಯಾಗ್ ಹಾಗೂ ಕಾರಿನೊಂದಿಗೆ ದರೋಡೆಕೋರರು ಪರಾರಿಯಾಗಿದ್ದರು. ಇಡೀ ದರೋಡೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲೂ ಸೆರೆಯಾಗಿತ್ತು.

ಆರೋಪಿಗಳಿಗಾಗಿ ಪೊಲೀಸರಿಂದ ತೀವ್ರ ಶೋಧ: ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ನಗರ ಪೊಲೀಸರು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದಾರೆ. “ದರೋಡೆಗೊಳಗಾಗಿದ್ದ ಕಾರು ಬಂಟ್ವಾಳ ಲಿಮಿಟ್ಸ್‌ನಲ್ಲಿ ಪತ್ತೆಯಾಗಿದೆ. ಆರೋಪಿಗಳು ಕಾರಿನ ಸೀಟ್ ಕವರ್‌ಗಳನ್ನು ಹರಿದು ಹಾಕಿ ಸಂಪೂರ್ಣ ಶೋಧ ನಡೆಸಿದ್ದಾರೆ. ಸದ್ಯ ಲಭ್ಯವಿರುವ ಪ್ರಮುಖ ಸುಳಿವುಗಳ ಆಧಾರದ ಮೇಲೆ ಪೊಲೀಸ್ ತಂಡಗಳು ತನಿಖೆಯನ್ನು ಸರಿಯಾದ ದಿಕ್ಕಿನಲ್ಲಿ ಮುಂದುವರಿಸಿದ್ದು, ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ” ಎಂದು ಪೊಲೀಸ್ ಆಯುಕ್ತರು ಹೇಳಿದ್ದಾರೆ.

ಕಾರಿನಲ್ಲಿದ್ದ ಸುಮಾರು 180 ಗ್ರಾಂ ಚಿನ್ನದ ಆಭರಣಗಳು, ನಗದು ಸೇರಿ ಒಟ್ಟು 20 ಲಕ್ಷ ರೂಪಾಯಿ ಸೊತ್ತನ್ನು ದರೋಡೆಕೋರರು ಲೂಟಿ ಮಾಡಿದ್ದಾರೆ ಎಂದು ವಿಕಾಸ್ ಸುರತ್ಕಲ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement