Published
12 hours agoon
By
Akkare News
ಆಗ್ರಾ, ಜುಲೈ 4: ಉತ್ತರ ಪ್ರದೇಶದ ಆಗ್ರಾದಲ್ಲಿ (Agra) 40 ವರ್ಷದ ಮಹಿಳೆಯೊಬ್ಬಳು ತನ್ನ ಪತಿಯನ್ನು ಕೊಲೆ ಮಾಡಿ, ಶವವನ್ನು ತನ್ನದೇ ಮನೆಯ ಬಾತ್‌ರೂಂನಲ್ಲಿ ಹೂತಿಟ್ಟಿದ್ದ ಭೀಕರ ಘಟನೆ ಬೆಳಕಿಗೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕೊಲೆ ಮತ್ತು ಸಾಕ್ಷ್ಯ ನಾಶದ ಕೃತ್ಯದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಕೋನದಲ್ಲಿ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆಕೆಯ ಮನೆಯ ಬಾತ್‌ರೂಂ ನೆಲದ ಮೇಲಿದ್ದ ಪ್ಲಾಸ್ಟರ್ ಪದರವನ್ನು ಕಾರ್ಮಿಕರ ಸಹಾಯದಿಂದ ಒಡೆದು ಪೊಲೀಸರು ಶವವನ್ನು ಹೊರತೆಗೆದಿದ್ದಾರೆ. ಪತಿ ನಾಪತ್ತೆಯಾಗಿದ್ದಾನೆ ಎಂದು ದೂರು ದಾಖಲಾದ ದಿನದಿಂದ ಕಳೆದ 45 ದಿನಗಳಿಂದ ಪೊಲೀಸರು ಈ ಪ್ರಕರಣದ ಬೆನ್ನುಬಿದ್ದಿದ್ದರು.
ಈ ಪ್ರಕರಣದ ತನಿಖೆಯ ಅವಧಿಯಲ್ಲಿ, ರೂಬಿ ಶರ್ಮ ಎಂಬ ಈ ಆರೋಪಿ ಮಹಿಳೆ ತನ್ನ ಪತಿ ಸುರೇಂದ್ರ ಶರ್ಮನ ಪತ್ತೆಗಾಗಿ ಪೊಲೀಸರ ಜೊತೆಗೂಡಿ ಹುಡುಕುವಂತೆ ನಾಟಕವಾಡಿ ಹಾದಿ ತಪ್ಪಿಸಲು ಯತ್ನಿಸಿದ್ದಾಳೆ. ಆದರೆ, ಕೊಲೆಯಾದ ಸುರೇಂದ್ರನ ಸಹೋದರನಿಗೆ ರೂಬಿಯ ಮೇಲೆ ಅನುಮಾನ ಬಂದ ಹಿನ್ನೆಲೆಯಲ್ಲಿ ಪೊಲೀಸರಿಗೆ ಈ ಪ್ರಕರಣದಲ್ಲಿ ದೊಡ್ಡ ಸುಳಿವು ಸಿಕ್ಕಿತ್ತು.
ನನ್ನ ಗಂಡ ನಾಪತ್ತೆಯಾದಾಗಿನಿಂದ ನನಗೆ ದಿಕ್ಕೇ ತೋಚದಂತಾಗಿದೆ ಎಂದು ಗೋಳಾಡುತ್ತಿದ್ದ ಆಕೆ ನೆರೆಹೊರೆಯವರ ಮುಂದೆ ಕಣ್ಣೀರಿಟ್ಟು ನಾಟಕವಾಡುತ್ತಿದ್ದಳು. ಆದರೆ, ಸುರೇಂದ್ರ ನಾಪತ್ತೆಯಾದ ಸಂದರ್ಭ ಮತ್ತು ಆಕೆ ನೀಡುತ್ತಿದ್ದ ಹೇಳಿಕೆಗಳ ನಡುವೆ ಹಲವಾರು ವ್ಯತ್ಯಾಸಗಳಿರುವುದನ್ನು ಸುರೇಂದ್ರನ ಕುಟುಂಬಸ್ಥರು ಗಮನಿಸಿದ್ದರು.




ಕೊಲೆ ನಡೆದ ಮರುದಿನ ಬೆಳಗ್ಗೆ ರೂಬಿ ತನ್ನ ಹೆಣ್ಣು ಮಕ್ಕಳನ್ನು ಮೈದುನನ ಮನೆಗೆ ಬಿಟ್ಟು ವಾಪಸ್ ಮನೆಗೆ ಬಂದಿದ್ದಳು. ನಂತರ ಬಾತ್‌ರೂಂನೊಳಗೆ ಹೊಂಡ ತೋಡಿ, ಸುರೇಂದ್ರನ ಶವವನ್ನು ನೆಲದ ಅಡಿಯಲ್ಲಿ ಹೂತು, ಕಾಂಕ್ರೀಟ್‌ನಿಂದ ಮುಚ್ಚಿ, ಅಪರಾಧವನ್ನು ಮರೆಮಾಚಲು ಅದರ ಮೇಲೆ ಹೊಸ ಟೈಲ್ಸ್‌ಗಳನ್ನು ಹಾಕಿದ್ದಾಳೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ತನ್ನ ಮೇಲೆ ಯಾರಿಗೂ ಅನುಮಾನ ಬರಬಾರದು ಎಂದು ಆಕೆ ತಾನೇ ಹೋಗಿ ತನ್ನ ಗಂಡ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು.
ಆದರೆ, ಸುರೇಂದ್ರ ನಾಪತ್ತೆಯಾದ ನಂತರವೂ ಕುಟುಂಬದ ಪೆನ್ಷನ್ ಖಾತೆಯಿಂದ ಹಣ ಡ್ರಾ ಆಗುತ್ತಿರುವುದನ್ನು ಸುರೇಂದ್ರನ ಸಹೋದರ ಅನಿಲ್ ಶರ್ಮಾ ಗಮನಿಸಿದಾಗ ತನಿಖೆ ಮಹತ್ವದ ತಿರುವು ಪಡೆಯಿತು. ಸುರೇಂದ್ರ ತನ್ನ ಬಳಿಯೇ ಎಟಿಎಂ ಕಾರ್ಡ್ ಹೊಂದಿದ್ದರಿಂದ ಅನಿಲ್ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರು. ಇದರಿಂದ ತನಿಖಾಧಿಕಾರಿಗಳ ಅನುಮಾನ ರೂಬಿ ಕಡೆಗೆ ತಿರುಗಿತು.
