Published
19 hours agoon
By
Akkare News
ಟೂರ್ನಿಯ ತಮ್ಮ ಮೊದಲ ಪಂದ್ಯದಲ್ಲಿ ವೇಲ್ಸ್ ವಿರುದ್ಧ ಶುಭಾರಂಭ ಮಾಡಿದ್ದ ಭಾರತ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಎದುರು ಮುಗ್ಗರಿಸಿತ್ತು. ಹೀಗಾಗಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಲು ಹಾಗೂ ಸರಣಿಯಲ್ಲಿ ಜೀವಂತವಾಗಿರಲು ಪಾಕ್ ವಿರುದ್ಧದ ಜಯ ಭಾರತಕ್ಕೆ ಅತ್ಯಗತ್ಯವಾಗಿತ್ತು.
ಅದ್ಭುತ ಗೋಲು ಬಾರಿಸಿದ ಅಭಿಷೇಕ್ ಆಟದ ಆರಂಭಿಕ ಕ್ಷಣದಿಂದಲೇ ಭಾರತೀಯ ಆಟಗಾರರು ಪಾಕಿಸ್ತಾನದ ಮೇಲೆ ಸತತ ದಾಳಿ ನಡೆಸಿದರು. ಪಂದ್ಯದ 5ನೇ ನಿಮಿಷದಲ್ಲೇ ಸಿಕ್ಕ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದುಪಯೋಗಪಡಿಸಿಕೊಂಡ ನಾಯಕ ಹರ್ಮನ್ಪ್ರೀತ್ ಸಿಂಗ್ ಖಾತೆ ತೆರೆದರು. ತದನಂತರ 11ನೇ ನಿಮಿಷದಲ್ಲಿ ಅಭಿಷೇಕ್ ಅದ್ಭುತ ಗೋಲು ಬಾರಿಸುವ ಮೂಲಕ ಭಾರತಕ್ಕೆ 2-0 ಮುನ್ನಡೆ ತಂದುಕೊಟ್ಟರು.
ಗೋಲುಗಳ ಸುರಿಮಳೆ ಎರಡನೇ ಕ್ವಾರ್ಟರ್ನಲ್ಲೂ ಭಾರತದ ಆಕ್ರಮಣಕಾರಿ ಆಟ ಮುಂದುವರಿಯಿತು. 20ನೇ ನಿಮಿಷದಲ್ಲಿ ಹರ್ಮನ್ಪ್ರೀತ್ ಸಿಂಗ್ ತಮ್ಮ ವೈಯಕ್ತಿಕ ಎರಡನೇ ಗೋಲು ಗಳಿಸಿ ತಂಡದ ಮುನ್ನಡೆಯನ್ನು 3-0ಗೆ ಹೆಚ್ಚಿಸಿದರು. ಈ ಹಂತದಲ್ಲಿ ಪ್ರತಿರೋಧ ಒಡ್ಡಿದ ಪಾಕಿಸ್ತಾನದ ಶಾಹಿದ್ ಹನ್ನನ್ ತಂಡದ ಪರ ಮೊದಲ ಗೋಲು ದಾಖಲಿಸಿದರು. ಆದರೆ ತಕ್ಷಣವೇ ಚೇತರಿಸಿಕೊಂಡ ಭಾರತದ ಅಭಿಷೇಕ್ 24ನೇ ನಿಮಿಷದಲ್ಲಿ ಆಕರ್ಷಕ ಫೀಲ್ಡ್ ಗೋಲ್ ಬಾರಿಸಿ ಸ್ಕೋರ್ ಅನ್ನು 4-1ಕ್ಕೆ ಏರಿಸಿದರು. ಮರುಕ್ಷಣವೇ 25ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ನಲ್ಲಿ ಪಾಕ್ನ ಸುಫ್ಯಾನ್ ಖಾನ್ ಗೋಲು ಬಾರಿಸಿದ್ದರಿಂದ ದ್ವಿತೀಯಾರ್ಧಕ್ಕೆ ಪಂದ್ಯ 4-2 ಹಂತ ತಲುಪಿತು.
34ನೇ ನಿಮಿಷದಲ್ಲಿ ಭಾರತದ ಹಾರ್ದಿಕ್ ಸಿಂಗ್ ನೀಡಿದ ಅದ್ಭುತ ಫಿನಿಶಿಂಗ್ನಿಂದಾಗಿ ಭಾರತ 5-2 ಗೋಲುಗಳ ಬಲವಾದ ಮುನ್ನಡೆ ಸಾಧಿಸಿತು. ನಂತರದ ನಿಮಿಷಗಳಲ್ಲಿ ಪಾಕಿಸ್ತಾನ ತಿರುಗಿಬೀಳಲು ಶ್ರಮಿಸಿದರೂ ಭಾರತೀಯ ಪಡೆ ಅವರ ಯತ್ನಗಳನ್ನು ವಿಫಲಗೊಳಿಸಿತು.
ಪಾಕ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ ಅಂತಿಮ ಕ್ವಾರ್ಟರ್ನ 46ನೇ ನಿಮಿಷದಲ್ಲಿ ಪಾಕಿಸ್ತಾನದ ಶಾಹಿದ್ ಹನ್ನನ್ ಮತ್ತೊಂದು ಗೋಲು ಗಳಿಸಿ ಅಂತರವನ್ನು 3-5ಕ್ಕೆ ತಗ್ಗಿಸಿದರು. ಇದರಿಂದ ಎಚ್ಚೆತ್ತುಕೊಂಡ ಭಾರತೀಯ ಆಟಗಾರರು ಅಂತಿಮ ಕ್ಷಣಗಳಲ್ಲಿ ರಕ್ಷಣಾತ್ಮಕ ಹಾಗೂ ಅತ್ಯಂತ ಜಾಗರೂಕತೆಯ ಆಟದ ಮೊರೆಹೋದರು. ಪಾಕಿಸ್ತಾನದ ಹಲವು ಪ್ರಯತ್ನಗಳ ಹೊರತಾಗಿಯೂ ಪಂದ್ಯದ ಅಂತಿಮ ಸೌಂಡ್ ವಿಸಿಲ್ ಮೊಳಗಿದಾಗ ಭಾರತ 5-3 ಅಂತರದ ಐತಿಹಾಸಿಕ ಜಯವನ್ನು ತನ್ನದಾಗಿಸಿಕೊಂಡಿತು.



