Published
17 hours agoon
By
Akkare News

ಬೆಂಗಳೂರು : ಹವ್ಯಕ ಭಾಷಾ ಅಕಾಡೆಮಿ ಸ್ಥಾಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ರಾಮಚಂದ್ರಾಪುರ ಮಠ ಧನ್ಯವಾದ ಸಲ್ಲಿಸಿದೆ. ಈ ಅಕಾಡೆಮಿ ಸ್ಥಾಪಿಸುವ ಘೋಷಣೆಯನ್ನು ಮುಖ್ಯಮಂತ್ರಿಗಳು ತಮ್ಮ ಬಜೆಟ್’ನಲ್ಲಿ ಮಾಡಿದ್ದಾರೆ. 2026-27ನೇ ಸಾಲಿನ ಆಯವ್ಯಯವನ್ನು ಸಿಎಂ, ಶುಕ್ರವಾರ (ಮಾರ್ಚ್ 6) ಮಂಡಿಸಿದ್ದರು. ಈ ಸಂಬಂಧ, ಮಠದ ಪ್ರಕಟಣೆ ಹೀಗಿದೆ
ಭಾಷೆಗೂ ಸಂಸ್ಕೃತಿಗೂ ಅನ್ಯೋನ್ಯ ಸಂಬಂಧವಿದ್ದು, ಭಾಷೆಯನ್ನು ಉಳಿಸಿ ಬೆಳಸುವ ಮೂಲಕ ಸಂಸ್ಕೃತಿಯನ್ನು ಉಳಿಸಿಕೊಳ್ಳ ಬಹುದಾಗಿದೆ. ಪ್ರಾಂತ್ಯವಾರು ವೈವಿಧ್ಯತೆಯ ಜೊತೆಗೆ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿರುವ ಹವಿಗನ್ನಡದ ಸಂವರ್ಧನೆಗಾಗಿ ರಾಜ್ಯ ಸರ್ಕಾರವು “ಹವ್ಯಕ ಭಾಷಾ ಅಕಾಡೆಮಿ”ಯನ್ನು ಸ್ಥಾಪಿಸಲು ನಿರ್ಧರಿಸಿರುವ ನಿರ್ಣಯವನ್ನು ಶ್ರೀರಾಮಚಂದ್ರಾಪುರ ಮಠವು ಸ್ವಾಗತಿಸುತ್ತದೆ ಹಾಗೂ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯನವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತದೆ.

ಸರ್ಕಾರದ ಈ ನಿರ್ಧಾರವು ಹವ್ಯಕ ಭಾಷೆಯ ಉಳಿವು, ಬೆಳವಣಿಗೆ ಹಾಗೂ ಅದರ ಅಧ್ಯಯನ ಮತ್ತು ಸಂಶೋಧನೆಗೆ ಹೊಸ ಉತ್ತೇಜನ ನೀಡಲಿದೆ ಹಾಗೂ ಅಕಾಡೆಮಿಯ ಮೂಲಕ ಭಾಷೆಯ ಪ್ರಚಾರ ಹಾಗೂ ಯುವಪೀಳಿಗೆಗೆ ಅದರ ಮಹತ್ವ ಪರಿಚಯಿಸುವ ಕಾರ್ಯಗಳು ಇನ್ನಷ್ಟು ವೇಗ ಪಡೆಯಲಿವೆ ಎಂದು ಶ್ರೀ ರಾಮಚಂದ್ರಾಪುರ ಮಠವು ಆಶಿಸುತ್ತದೆ. ಹಾಗೂ ಭಾಷಾ ಉಳಿವಿನ ಈ ಕಾರ್ಯಕ್ಕೆ ಮುನ್ನುಡಿ ಬರೆದ ಶ್ರೀ ಅಖಿಲ ಹವ್ಯಕ ಮಹಾಸಭೆ ಮತ್ತು ಕೈಜೋಡಿಸಿದ ಎಲ್ಲರಿಗೂ ಶ್ರೀಮಠವು ಶುಭಹಾರೈಸುತ್ತದೆ.

ಹವಿಗನ್ನಡದ ಸಂರಕ್ಷಣೆ ಹಾಗೂ ಸಂವರ್ಧನೆಗಾಗಿ ಭಾಷಾ ಅಕಾಡೆಮಿಯನ್ನು ಘೋಷಿಸಿರುವ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ಧರಾಮಯ್ಯನವರು ಹಾಗೂ ಕರ್ನಾಟಕ ಸರ್ಕಾರಕ್ಕೆ ಹವ್ಯಕ ಮಹಾಸಭೆಯು ಧನ್ಯವಾದಗಳನ್ನು ಸಮರ್ಪಿಸುತ್ತದೆ.

ಹವಿಗನ್ನಡ, ಹವ್ಯಕ ಕನ್ನಡ, ಹೈವಗನ್ನಡ, ಹೈಗಭಾಷೆ ಎಂಬ ಹೆಸರುಗಳಿಂದ ಗುರುತಿಸಲ್ಪಡುವ ಹವ್ಯಕ ಭಾಷೆಯು ಕನ್ನಡದ ಸಾಮಾಜಿಕ ಉಪಭಾಷೆಯಾಗಿದ್ದು, ಭಾಷಾ ವೈವಿಧ್ಯ ಹಾಗೂ ಭಾಷಾ ಶ್ರೀಮಂತಿಕೆ ಕಾರಣದಿಂದಾಗಿ ಭಾಷಾ ಜಗತ್ತಿನಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಪ್ರಾಂತ್ಯವಾರು ಭಾಷಾ ವೈವಿಧ್ಯ ಹವಿಗನ್ನಡದ ಶ್ರೀಮಂತಿಕೆಯ ಪ್ರತೀಕವಾಗಿದ್ದು, ಉತ್ತರಕನ್ನಡ, ದಕ್ಷಿಣಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಕೊಡಗು, ಕಾಸರಗೋಡು ಮುಂತಾದ ಪ್ರದೇಶಗಳಲ್ಲಿ ವಾಸವಾಗಿರುವ 6 ಲಕ್ಷಕ್ಕೂ ಅಧಿಕ ಹವ್ಯಕರ ಮನೆ ಮಾತಾಗಿದೆ.

ಕನ್ನಡ ಭಾಷೆಯ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಹವಿಗನ್ನಡದ ಅಧ್ಯಯನ ಬಹಳ ಮುಖ್ಯವಾಗಿದ್ದು, ಇದುವರೆಗೆ ಲಭ್ಯವಿರುವ ಅತ್ಯಂತ ಹಳೆಯ ಕನ್ನಡ ಸಾಹಿತ್ಯ ಮತ್ತು ಶಾಸನಗಳಲ್ಲಿಯೂ ಕಂಡುಬರುವ ಕೆಲವು ಆದಿ-ದ್ರಾವಿಡ (Proto – Dravidian) ಲಕ್ಷಣಗಳನ್ನು ಹವಿಗನ್ನಡವು ಇಂದಿಗೂ ಉಳಿಸಿಕೊಂಡಿದೆ. ಆದ್ದರಿಂದ ಹವಿಗನ್ನಡದ ಅಮೂಲಾಗ್ರ ಅಧ್ಯಯನ ಹಾಗ ಸಂರಕ್ಷಣೆಗಾಗಿ ಹವ್ಯಕ ಭಾಷಾ ಅಕಾಡೆಮಿಯ ಸ್ಥಾಪನೆ ಅತ್ಯಗತ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಹವ್ಯಕ ಭಾಷಾ ಅಕಾಡೆಮಿಯನ್ನು ಸ್ಥಾಪಿಸುವ ನಿರ್ಧಾರವನ್ನು ಕೈಗೊಂಡಿರುವ, ರಾಜ್ಯ ಸರ್ಕಾರಕ್ಕೆ ಹಾಗೂ ಈ ಪ್ರಯತ್ನಕ್ಕೆ ಕೈಜೋಡಿಸಿದ ಎಲ್ಲಾ ಹಿತೈಷಿಗಳಿಗೂ ಸಮಾಜದ ಪ್ರಾತಿನಿಧಿಕ ಸಂಸ್ಥೆ ಶ್ರೀ ಅಖಿಲ ಹವ್ಯಕ ಮಹಾಸಭೆ ಹಾಗೂ ಸಮಸ್ತ ಹವ್ಯಕ ಸಮಾಜದ ಪರವಾಗಿ ಧನ್ಯವಾದಗಳನ್ನು ಮಹಾಸಭೆಯ ಅಧ್ಯಕ್ಷರಾದ ಡಾ.ಗಿರಿಧರ ಕಜೆ ತಿಳಿಸಿದ್ದಾರೆ.






