Published
8 hours agoon
By
Akkare News
ಮಂಗಳೂರು:ಸೆಪ್ಟೆಂಬರ್ 30: ಇಲ್ಲಿನ ಜೋಕಟ್ಟೆ ಬಳಿಯಿರುವ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್)ನ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಟೆಸ್ಟಿಂಗ್ ಮಾಡುವ ಸಂದರ್ಭದಲ್ಲಿ ಭಾರೀ ಸ್ಫೋಟ ಸಂಭವಿಸಿರುವ ಘಟನೆ ನಡೆದಿದೆ. ‘ಅವಘಡದಲ್ಲಿ 9 ಕಾರ್ಮಿಕರಿಗೆ ಗಾಯಗಳಾಗಿದ್ದು, ಪ್ರಸ್ತುತ ಬೆಂಕಿ ನಿಯಂತ್ರಣಕ್ಕೆ ಬಂದಿದೆ’ ಎಂದು ಮಂಗಳೂರು ಜಿಲ್ಲಾಧಿಕಾರಿ ದರ್ಶನ್ ಹೆಚ್ವಿ ಮಾಹಿತಿ ನೀಡಿದ್ದಾರೆ.
ಜನರಿಗೆ ಗಾಯ ಸುರತ್ಕಲ್ ನಿವಾಸಿ ರಾಜೇಶ್ಗೆ ಶೇಕಡಾ 35ರಷ್ಟು ಗಾಯಗಳಾಗಿದ್ದು, ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಪ್ರಸಾದ್, ಇಂದ್ರಜೀತ್, ರಾಮನ್ಗೆ ಎಜಿ ಆಸ್ಪತ್ರೆಗೆ ಮತ್ತು ಗಾಯಾಳುಗಳಾದ ಜೆರೋಮ್, ಜಯರಾಮ್, ಅವಿನಾಶ್ ಹಾಗೂ ಅಕ್ಷಯ್ ಎಂಬುವರಿಗೆ MRPL ಆಸ್ಪತ್ರೆಗೆ ದಾಖಲಿಸಲಾಗಿದೆ.
ನಡೆದಿದ್ದೇನು? ಇಂದು ಮಧ್ಯಾಹ್ನ 12.15 ಗಂಟೆಗೆ ಎಂಆರ್ಪಿಎಲ್ನ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಟೆಸ್ಟಿಂಗ್ ಮಾಡುವ ಸಂದರ್ಭದಲ್ಲಿ ಭಾರೀ ಸ್ಫೋಟ ಸಂಭವಿಸಿದೆ. 11.30 ಗಂಟೆಗೆ ಶಿಫ್ಟ್ ಬದಲಾವಣೆ ಹಿನ್ನೆಲೆ ಘಟಕದಿಂದ ಕಾರ್ಮಿಕರು ಹೊರ ಹೋಗಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ. ಆದರೆ 9 ಕಾರ್ಮಿಕರು ಗಾಯಗೊಂಡಿದ್ದಾರೆ. ಒಂದೆ ವೇಳೆ ಕಾರ್ಮಿಕರು ಒಳಗೆ ಇದ್ದಿದ್ದರೆ ಭಾರೀ ಸಾವು ನೋವು ಸಾಧ್ಯತೆ ಇತ್ತು ಎನ್ನಲಾಗಿದೆ.
ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದ ಯುಟಿ ಖಾದರ್ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಪ್ರತಿಕ್ರಿಯಿಸಿದ್ದು, ‘MRPLನಲ್ಲಿ ಟೆಸ್ಟಿಂಗ್ ಮಾಡುವ ಸಂದರ್ಭದಲ್ಲಿ ಸ್ಫೋಟ ಆಗಿದೆ. ಘಟನೆಯಲ್ಲಿ ಗಾಯಗೊಂಡಿರುವವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಎಲ್ಲವೂ ನಿಯಂತ್ರಣಕ್ಕೆ ಬಂದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ’ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಆಂಬ್ಯುಲೆನ್ಸ್ ಚಾಲಕ ನವಾಜ್ ಪ್ರತಿಕ್ರಿಯಿಸಿದ್ದು, ‘ಕಾರ್ಯಾಚರಣೆ ಮುಂದುವರೆದಿದೆ. ಘಟನಾ ಸ್ಥಳದಲ್ಲಿ ಇನ್ನು ಕೂಡ ಬೆಂಕಿ ಆರಿಲ್ಲ’ ಎಂದು ಮಾಹಿತಿ ನೀಡಿದ್ದಾರೆ.
ಸ್ಫೋಟದ ಶಬ್ಧಕ್ಕೆ ಬೆಚ್ಚಿಬಿದ್ದ ಜನರು ಇನ್ನು ಭೀಕರ ಸ್ಫೋಟದಿಂದ ಪಣಂಬೂರು, ಕಾವೂರು, ಸುರತ್ಕಲ್, ಜೋಕಟ್ಟೆ ಭಾಗದ ಸುತ್ತಮುತ್ತಲಿನ ಕೆಲವೆಡೆ ಮನೆಗಳು ಕಂಪಿಸಿದೆ. ಸ್ಪೋಟದ ತೀರ್ವತೆ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಅಷ್ಟೇ ಅಲ್ಲದೆ ಭಾರೀ ಸ್ಟೋಟದ ಶಬ್ಧಕ್ಕೆ ಗ್ರಾಮದ ಜನರು ಬೆಚ್ಚಿಬಿದ್ದಾರೆ. ವಿಮಾನನಿಲ್ದಾಣಕ್ಕೆ ಯಾವುದೇ ಹಾನಿ ಆಗಿಲ್ಲ ಮಂಗಳೂರು ವಿಮಾನ ನಿಲ್ದಾಣದ ಮೂಲಸೌಕರ್ಯಕ್ಕೆ ಯಾವುದೇ ಹಾನಿಯಾಗಿಲ್ಲ ಹಾಗೂ ಇಲ್ಲಿನ ಗಾಜು ಒಡೆದಿಲ್ಲ. ಆದರೆ, MRPL ಸುತ್ತಮುತ್ತಲಿನ ಇತರ ಪ್ರದೇಶಗಳಂತೆ ಮಂಗಳೂರು ವಿಮಾನ ನಿಲ್ದಾಣದಲ್ಲೂ ಸ್ಫೋಟದ ಪರಿಣಾಮದ ಅನುಭವ ಆಗಿರುವುದು ಸತ್ಯ ಎಂದು ಏರ್ಪೋರ್ಟ್ನಿಂದ ಮಾಹಿತಿ ನೀಡಲಾಗಿದೆ.

