Connect with us

ಸ್ಥಳೀಯ

ಮಲೇಷ್ಯಾದಲ್ಲಿ ಭೂಗತ ಪಾತಕಿ ಹೇಮಂತ್ ಪೂಜಾರಿ ವಶಕ್ಕೆ? ಉಡುಪಿ ಜಿಲ್ಲೆಯ ಉದ್ಯಮಿಗಳಿಗೆ ಹಣಕ್ಕಾಗಿ ಬೆದರಿಕೆ; ಮುಂಬೈ ಪೊಲೀಸರ ಕಾರ್ಯಾಚರಣೆ

Published

on

ಉಡುಪಿ: ಜಿಲ್ಲೆಯ ಉದ್ಯಮಿಗಳಿಗೆ ಅಂತರರಾಷ್ಟ್ರೀಯ ದೂರವಾಣಿ ಕರೆ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಲ್ಲದೆ, ಹಣ ನೀಡದಿದ್ದರೆ ಗುಂಡಿಕ್ಕಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿರುವ ಭೂಗತ ಪಾತಕಿ ಹೇಮಂತ್ ಪೂಜಾರಿಯನ್ನು ಮುಂಬೈ ಪೊಲೀಸರು ಮಲೇಷ್ಯಾದಲ್ಲಿ ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ಹೇಮಂತ್ ಪೂಜಾರಿ ಅಲಿಯಾಸ್ ‘ಎಚ್.ಪಿ.’ ಉಡುಪಿ ಜಿಲ್ಲೆಯ 17ಕ್ಕೂ ಅಧಿಕ ಬಿಲ್ಡರ್‌ಗಳು, ಹೋಟೆಲ್ ಉದ್ಯಮಿಗಳು, ಸಿವಿಲ್ ಗುತ್ತಿಗೆದಾರರು, ರಾಜಕಾರಣಿಗಳು ಹಾಗೂ ದೊಡ್ಡ ಕಂಪೆನಿಗಳ ಮುಖ್ಯಸ್ಥರಿಗೆ ಅಂತರರಾಷ್ಟ್ರೀಯ ಮೊಬೈಲ್ ಕರೆ ಮಾಡಿ ಹಣಕ್ಕಾಗಿ ಒತ್ತಾಯಿಸುತ್ತಿದ್ದ. ಹಣ ನೀಡದಿದ್ದರೆ ಗುಂಡಿಕ್ಕಿ ಕೊ* ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ ಎಂಬ ದೂರುಗಳು ಪೊಲೀಸರಿಗೆ ಬಂದಿದ್ದವು. ಈ ಮಧ್ಯೆ, ಕಳೆದ ಸೆಪ್ಟೆಂಬರ್‌ನಲ್ಲಿ ಮುದರಂಗಡಿಯ ಉದ್ಯಮಿ ಡೇವಿಡ್ ಡಿಸೋಜ ಅವರನ್ನು ಹೇಮಂತ್ ಪೂಜಾರಿಯ ಸಹಚರರು ತಲೆಗೆ ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಪೊಲೀಸರು ಒಟ್ಟು 10 ಆರೋಪಿಗಳನ್ನು ಬಂಧಿಸಿದ್ದು, ಹೇಮಂತ್ ಪೂಜಾರಿಯನ್ನು 11ನೇ ಆರೋಪಿಯನ್ನಾಗಿ ಹೆಸರಿಸಿ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ (ಕೆಸಿಒಸಿಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ಹೇಮಂತ್ ಪೂಜಾರಿ ವಿರುದ್ಧ ಶಿರ್ವ, ಪಡುಬಿದ್ರಿ, ಕಾಪು ಹಾಗೂ ಮಣಿಪಾಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು ಎಂಟು ಪ್ರಕರಣಗಳು ದಾಖಲಾಗಿದ್ದವು. ಸ್ಥಳೀಯ ಉದ್ಯಮಿಗಳ ಮಾಹಿತಿ ಹಾಗೂ ಮೊಬೈಲ್ ಸಂಖ್ಯೆಗಳನ್ನು ಹೇಮಂತ್ ಪೂಜಾರಿಗೆ ಒದಗಿಸುತ್ತಿದ್ದ ಆರೋಪದ ಮೇಲೆ ಎರ್ಮಾಳು ಬಡಾ ನಿವಾಸಿ ಸುರೇಶ್ ಅಮೀನ್ (38) ಮತ್ತು ಸಾಂತೂರಿನ ಹರೀಶ್ ಪೂಜಾರಿ (45) ಎಂಬುವವರನ್ನು ಪೊಲೀಸರು ಬಂಧಿಸಿದ್ದರು.

ತನ್ನ ಸಹಚರರ ಬಂಧನಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಪೊಲೀಸ್ ಅಧಿಕಾರಿಗಳ ಕುಟುಂಬದವರಿಗೂ ಹೇಮಂತ್ ಪೂಜಾರಿ ಬೆದರಿಕೆ ಹಾಕಿದ್ದ ಎಂಬ ಆರೋಪವೂ ಕೇಳಿಬಂದಿತ್ತು. ಈ ನಡುವೆ, ಬೆದರಿಕೆ ಎದುರಿಸಿದ್ದ ಉಡುಪಿಯ ಉದ್ಯಮಿಯೊಬ್ಬರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆಪ್ತ ವಲಯಕ್ಕೆ ಸಂಪರ್ಕ ಹೊಂದಿರುವ ಉದ್ಯಮಿಯ ಮೂಲಕ ಪ್ರಭಾವ ಬೀರಿ, ಹೇಮಂತ್ ಪೂಜಾರಿಯನ್ನು ಪತ್ತೆಹಚ್ಚುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಇದರ ಬೆನ್ನಲ್ಲೇ ಮುಂಬೈ ಪೊಲೀಸರು ಅಂತರರಾಷ್ಟ್ರೀಯ ಗುಪ್ತಚರ ಸಂಸ್ಥೆ ‘ರಾ’ (RAW) ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ, ಹೇಮಂತ್ ಪೂಜಾರಿ ಮಲೇಷ್ಯಾದಲ್ಲಿ ಅಡಗಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದರು ಎಂದು ತಿಳಿದುಬಂದಿದೆ. ಬಳಿಕ ಮುಂಬೈನಲ್ಲಿದ್ದ ಹೇಮಂತ್ ಪೂಜಾರಿಯ ಆಪ್ತನೊಬ್ಬನನ್ನು ಮಲೇಷ್ಯಾಕ್ಕೆ ಕರೆದೊಯ್ದು, ಆತನ ನೆರವಿನಿಂದ ಕಾರ್ಯಾಚರಣೆ ನಡೆಸಿದ ಪೊಲೀಸರು ಹೇಮಂತ್ ಪೂಜಾರಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ. ಸದ್ಯ ಆತನನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಮೂಲಗಳು ತಿಳಿಸಿವೆ.

 

Continue Reading
Click to comment

Leave a Reply

Your email address will not be published. Required fields are marked *

Advertisement