Published
18 hours agoon
By
Akkare News
ರೇಷನ್ ಕಾರ್ಡ್ ಇ-ಕೆವೈಸಿ ಮಾಡಿಸಲು ಈ ಹಿಂದೆ ನಿಗದಿಪಡಿಸಲಾಗಿದ್ದ ನವೆಂಬರ್ 10ರ ಗಡುವನ್ನು ಇದೀಗ ನವೆಂಬರ್ 30ರ ವರೆಗೆ ವಿಸ್ತರಣೆ ಮಾಡಲಾಗಿದೆ. ಫಲಾನುಭವಿಗಳಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಸರ್ಕಾರ ಈ ಮಹತ್ವದ ನಿರ್ಧಾರವನ್ನು ತೆಗದುಕೊಂಡಿದೆ.
ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆ ರಾಜ್ಯದಲ್ಲಿ ಒಟ್ಟು 2.67 ಕೋಟಿ ಪಡಿತರ ಫಲಾನುಭವಿಗಳಿದ್ದು, ಈ ಪೈಕಿ ಸುಮಾರು 2.27 ಕೋಟಿ ಮಂದಿ ಈಗಾಗಲೇ ಇ-ಕೆವೈಸಿ ಮಾಡಿಸಿದ್ದಾರೆ. ಆದರೆ, ಇನ್ನೂ ಸುಮಾರು 39 ಲಕ್ಷ ಫಲಾನುಭವಿಗಳ ಇ-ಕೆವೈಸಿ ಬಾಕಿ ಉಳಿದಿದೆ. ಪದೇ ಪದೇ ಗಡುವು ವಿಸ್ತರಿಸುವುದರಿಂದ ಯೋಜನೆಯ ಪಾರದರ್ಶಕತೆಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ, ನವೆಂಬರ್ 30ರ ನಂತರ ಯಾವುದೇ ಕಾರಣಕ್ಕೂ ದಿನಾಂಕವನ್ನು ವಿಸ್ತರಿಸುವುದಿಲ್ಲ ಎಂದು ಆಹಾರ ಇಲಾಖೆ ಸ್ಪಷ್ಟಪಡಿಸಿದೆ. ನಿಗದಿತ ಅವಧಿಯೊಳಗೆ ಇದನ್ನು ಪೂರ್ಣಗೊಳಿಸದಿದ್ದರೆ ಅಂತಹವರ ಪಡಿತರ ಸ್ಥಗಿತಗೊಳ್ಳುವ ಅಥವಾ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆಯಿದೆ.
ಮೊಬೈಲ್ ಆ್ಯಪ್ ಮೂಲಕ ಇ-ಕೆವೈಸಿ
ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋದವರು ಅಥವಾ ಹಿರಿಯ ನಾಗರಿಕರು ನ್ಯಾಯಬೆಲೆ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಲ್ಲುವುದನ್ನು ತಪ್ಪಿಸಲು, ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿಯೂ ‘ಅನ್ನಸೇವೆ’ ಮೊಬೈಲ್ ಆ್ಯಪ್ ಸೌಲಭ್ಯ ಕಲ್ಪಿಸಲಾಗಿದೆ. ಈ ಆ್ಯಪ್ ಮೂಲಕ ಕೇವಲ 5 ನಿಮಿಷಗಳಲ್ಲಿ ಮನೆಯಲ್ಲೇ ಇ-ಕೆವೈಸಿ ಪೂರ್ಣಗೊಳಿಸಬಹುದು.
ಮೊಬೈಲ್‌ನಲ್ಲೇ ಇ-ಕೆವೈಸಿ ಪೂರ್ಣಗೊಳಿಸುವುದೇಗೆ? * ನಿಮ್ಮ ಸ್ಮಾರ್ಟ್‌ಫೋನ್‌ನ ಗೂಗಲ್ ಪ್ಲೇ ಸ್ಟೋರ್‌ನಿಂದ (Google Play Store) ಅಧಿಕೃತ ‘Anna Seve’ ಆ್ಯಪ್ (ಹಾಗೂ ಅಗತ್ಯವಿದ್ದರೆ Aadhaar Face RD ಆ್ಯಪ್) ಡೌನ್‌ಲೋಡ್ ಮಾಡಿಕೊಳ್ಳಿ.
* ಆ್ಯಪ್ ತೆರೆದು, ಲಾಗಿನ್ ವಿಭಾಗದಲ್ಲಿ ‘ಸ್ವಯಂ/ನಾಗರಿಕ’ (Self/Citizen) ಆಯ್ಕೆಯನ್ನು ಕ್ಲಿಕ್ ಮಾಡಿ. * ಪಟ್ಟಿಯಿಂದ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ, ನಂತರ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ. * ಆಧಾರ್ ಅಥವಾ ರೇಷನ್ ಕಾರ್ಡ್‌ಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ (OTP) ಹಾಕಿ ದೃಢೀಕರಿಸಿ.
* ಮುಖದ ಸ್ಕ್ಯಾನ್ (Face Authentication): ಪರದೆಯ ಮೇಲೆ ನಿಮ್ಮ ಕುಟುಂಬ ಸದಸ್ಯರ ಹೆಸರುಗಳು ಕಾಣಿಸುತ್ತವೆ.
* ಇ-ಕೆವೈಸಿ ಬಾಕಿ ಇರುವ ಸದಸ್ಯರನ್ನು ಆಯ್ಕೆ ಮಾಡಿ, ಮೊಬೈಲ್ ಕ್ಯಾಮೆರಾ ಮುಂದೆ ಬೆಳಕಿರುವ ಜಾಗದಲ್ಲಿ ನಿಂತು ಮುಖವನ್ನು ಸ್ಕ್ಯಾನ್ ಮಾಡಿ. ‘ಇ-ಕೆವೈಸಿ ಯಶಸ್ವಿ’ (e-KYC Successful) ಎಂಬ ಸಂದೇಶ ಬಂದರೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಪಡಿತರ ಚೀಟಿಯಲ್ಲಿ ಹೆಸರಿರುವ ಕುಟುಂಬದ ಪ್ರತಿಯೊಬ್ಬ ಸದಸ್ಯರೂ ಪ್ರತ್ಯೇಕವಾಗಿ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ಮನೆಯಲ್ಲಿ ಸ್ಮಾರ್ಟ್‌ಫೋನ್ ಇಲ್ಲದಿದ್ದರೆ ಅಥವಾ ಮೊಬೈಲ್‌ನಲ್ಲಿ ಮುಖದ ಸ್ಕ್ಯಾನ್ ಯಶಸ್ವಿ ಆಗದಿದ್ದರೆ, ಆತಂಕಪಡುವ ಅಗತ್ಯವಿಲ್ಲ. ನಿಮ್ಮ ರೇಷನ್ ಕಾರ್ಡ್ ಮತ್ತು ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್‌ಗಳೊಂದಿಗೆ ಹತ್ತಿರದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಉಚಿತವಾಗಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು. ಒಟ್ಟಿನಲ್ಲಿ ಇದೀಗ ಮತ್ತೆ ಈ ಪ್ರಕ್ರಿಯೆಯ ದಿನಾಂಕವನ್ನು ಮತ್ತೆ ವಿಸ್ತರಣೆ ಮಾಡಿರುವುದುದರಿಂದ ಫಲಾನುಭವಿಗಳಿಗೆ ನೆಮ್ಮದಿಯ ಸುದ್ದಿ ಸಿಕ್ಕಂತಾಗಿದೆ. 




