Published
4 hours agoon
By
Akkare News
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ದಿನದಿಂದ ಆಗಾಗ್ಗೆ ಸೇರುವ ಬಣಗಳ ‘ಭಿನ್ನ ಸಭೆ’ಗಳಿಂದಲೇ ಸುದ್ದಿಯಾಗುತ್ತಿದ್ದ ಕಾಂಗ್ರೆಸ್, ಮಂಗಳವಾರದ ಮಟ್ಟಿಗೆ ಅದೆಲ್ಲವನ್ನೂ ಬದಿಗೊತ್ತಿ ಕೆಪಿಸಿಸಿ ಅಧ್ಯಕ್ಷರ 6 ವರ್ಷಗಳ ಸಂಭ್ರಮಾಚರಣೆಯಲ್ಲಿ ಮಿಂದೆದ್ದಿತು.ನಾಯಕತ್ವ ಬದಲಾವಣೆ ವಿಚಾರ, ಸಂಪುಟ ಪುನಾರಚನೆ ಒಳಗೊಂಡಂತೆ ವಿವಿಧ ವಿಚಾರಗಳಲ್ಲಿ ಪರ-ವಿರೋಧ ಹೇಳಿಕೆಗಳನ್ನು ನೀಡುತ್ತಿದ್ದವರೆಲ್ಲೂ ಮಂಗಳವಾರ ‘ಕಾಂಗ್ರೆಸ್ ಬಣ’ವಾಗಿ ಡಿನ್ನರ್ ಪಾರ್ಟಿಯಲ್ಲಿ ಸಕ್ರಿಯವಾಗಿದ್ದರು.
ಸಿಎಂ-ಡಿಸಿಎಂ, ದಲಿತ, ಇದೆಲ್ಲದರಿಂದ ಹೊರತಾದದ್ದೂ ಒಳಗೊಂಡಂತೆ ಎಲ್ಲ ಬಣಗಳ ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು ಈ ಅಪರೂಪದ ಪಾರ್ಟಿಯಲ್ಲಿ ಮುಖಾಮುಖಿಯಾದರು.

ಹಸ್ತಲಾಘವ ಮಾಡಿ, ಉಭಯ ಕುಶಲೋಪರಿ ಹಂಚಿಕೊಂಡರು. ಕೆಲಹೊತ್ತು ಹರಟಿದ ಬಳಿಕ ಸದ್ದಿಲ್ಲದೆ ಹಿಂತಿರುಗಿದ್ದೂ ಕಂಡುಬಂತು.
ಆರಂಭದಲ್ಲೇ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಿವಕುಮಾರ್ ಅವರಿಗೆ ಪುಷ್ಪಗುಚ್ಛ ನೀಡಿ ಶುಭ ಹಾರೈಸಿದರು. ಅದೇ ರೀತಿ, ಉಳಿದ ಮುಖಂಡರೂ ಪುಷ್ಪಗುಚ್ಛಗಳನ್ನು ನೀಡಿದರು. ಒಂದೂವರೆ ಗಂಟೆಗೂ ಹೆಚ್ಚು ಕಾಲ ಈ ಔತಣಕೂಟದಲ್ಲಿ ಮುಖ್ಯಮಂತ್ರಿಗಳು ಹಾಜರಿದ್ದರು. ಅವರಿಗೆ ಆಪ್ತ ವಲಯವೂ ಸಾಥ್ ನೀಡಿತು. ಅಧಿವೇಶನ ಸಂದರ್ಭದಲ್ಲೇ ನಡೆದ ಔತಣಕೂಟವು ಪ್ರತಿಪಕ್ಷಗಳಿಗೆ ಒಂದು ರೀತಿ ಒಗ್ಗಟ್ಟಿನ ಸಂದೇಶ ರವಾನಿಸಿದಂತಿತ್ತು.

ಎರಡೂ ಬಣಗಳಲ್ಲಿ ಗುರುತಿಸಿಕೊಂಡವರು ಔತಣಕೂಟದಲ್ಲಿ ಇದ್ದುದರಿಂದ ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ, ದೆಹಲಿ ಭೇಟಿ, ಹೈಕಮಾಂಡ್ ಜತೆಗಿನ ಸಮಾಲೋಚನೆಯಂತಹ ಯಾವುದೇ ವಿಚಾರಗಳ ಚರ್ಚೆಗೆ ಅವಕಾಶ ಇರಲಿಲ್ಲ. ಇದೊಂದು ಔಪಚಾರಿಕ ಔತಣಕೂಟವಾಗಿತ್ತು ಅಷ್ಟೇ. ಗೃಹ ಸಚಿವ ಡಾ.ಜಿ. ಪರಮೇಶ್ವರ, ಮಾಜಿ ಸಚಿವ ಕೆ.ಎನ್. ರಾಜಣ್ಣ, ಸತೀಶ್ ಜಾರಕಿಹೊಳಿ ಸೇರಿದಂತೆ ಎಲ್ಲ ನಾಯಕರೂ ಭಾಗವಹಿಸಿದ್ದರು’ ಎಂದು ಹೆಸರು ಹೇಳಲಿಚ್ಛಿಸದ ಶಾಸಕರೊಬ್ಬರು ಸ್ಪಷ್ಟಪಡಿಸಿದರು.

ಕೈ’ ಕೂಟದಲ್ಲಿ ಬಿಜೆಪಿ ಉಚ್ಚಾಟಿತ ಶಾಸಕರಿಗೆ ಔತಣ!
ಅದು ಬರೀ ಕಾಂಗ್ರೆಸ್ ಶಾಸಕರು, ವಿಧಾನ ಪರಿಷತ್ತಿನ ಕಾಂಗ್ರೆಸ್ ಸದಸ್ಯರು ಹಾಗೂ ಮುಖಂಡರಿದ್ದ ‘ಕೂಟ’. ಆದರೆ, ಅದರಲ್ಲಿ ಗಮನಸೆಳೆದಿದ್ದು ಬಿಜೆಪಿಯಿಂದ ಉಚ್ಚಾಟನೆಗೊಂಡಿರುವ ಶಾಸಕರಿಬ್ಬರ ಔತಣ!
ಬಿಜೆಪಿಯ ಉಚ್ಛಾಟಿತ ಶಾಸಕರಾದ ಎಸ್.ಟಿ. ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್, ಕೆಪಿಸಿಸಿ ಅಧ್ಯಕ್ಷರ 6 ವರ್ಷಗಳ ಸಂಭ್ರಮಾಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಶಿವಕುಮಾರ್ ಅವರಿಗೆ ಪುಷ್ಪಗುಚ್ಛ ನೀಡಿ, ಶುಭ ಹಾರೈಸಿದ ಇಬ್ಬರೂ ಶಾಸಕರು, ನಂತರ ಭೋಜನ ಸ್ವೀಕರಿಸಿದರು.
ಈ ಹಿಂದೆ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೂ ಈ ಇಬ್ಬರು ಶಾಸಕರು ಭಾಗವಹಿಸಿದ್ದರು.

ಇಂದು ಮತ್ತೆ ಸೇರಲಿರುವ ‘ಕೈ’ ಶಾಸಕರು
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬುಧವಾರ ಸಂಜೆ ನಡೆಯಲಿರುವುದರಿಂದ ಮತ್ತೆ ಆಡಳಿತ ಪಕ್ಷದ ಎಲ್ಲ ಶಾಸಕರು ಮತ್ತು ವಿಧಾನ ಪರಿಷತ್ತಿನ ಸದಸ್ಯರು ಸೇರಲಿದ್ದಾರೆ. ಒಟ್ಟಿಗೆ ಭೋಜನ ಸ್ವೀಕರಿಸಲಿದ್ದಾರೆ. ಸಭೆಯಲ್ಲಿ ಶಾಸಕರು, ಅಭಿವೃದ್ಧಿಗೆ ಅನುದಾನ, ಅಧಿವೇಶನದಲ್ಲಿ ಬಜೆಟ್ ಕುರಿತು ಸಮರ್ಥನೆ ಮತ್ತಿತರ ಚರ್ಚೆಗಳು ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.




