Published
4 hours agoon
By
Akkare News
ಬೆಂಗಳೂರು::ಕರ್ನಾಟಕ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಮುಖ್ಯಮಂತ್ರಿ ಆಯ್ಕೆ ಪ್ರಕ್ರಿಯೆ ಇದೀಗ ಅಂತಿಮ ಹಂತಕ್ಕೆ ತಲುಪಿದೆ. ನಾಳೆ ಬೆಂಗಳೂರಿನ ವಿಧಾನಸೌಧದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಮಹತ್ವದ ಸಭೆ ಕರೆಯಲಾಗಿದ್ದು, ಈ ಸಭೆಯ ಬೆನ್ನಲ್ಲೇ ರಾಜ್ಯದ ಮುಂದಿನ ನೂತನ ಮುಖ್ಯಮಂತ್ರಿ ಯಾರು ಎಂಬ ಅಧಿಕೃತ ಘೋಷಣೆ ಹೊರಬೀಳಲಿದೆ.

ವಿಧಾನಸೌಧದಲ್ಲಿ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲಾ ನೂತನ ಶಾಸಕರ ಅಭಿಪ್ರಾಯವನ್ನು ಪಡೆದು, ಹೈಕಮಾಂಡ್ ಸೂಚನೆಯಂತೆ ನಾಯಕನ ಹೆಸರನ್ನು ಅಂತಿಮಗೊಳಿಸಲಾಗುತ್ತದೆ. ಈ ಸಭೆಯು ಕೇವಲ ಮುಖ್ಯಮಂತ್ರಿ ಆಯ್ಕೆಗೆ ಮಾತ್ರ ಸೀಮಿತವಾಗಿರದೆ, ಮುಂದಿನ ಸರ್ಕಾರದ ಸುಗಮ ಆಡಳಿತ ಮತ್ತು ಪಕ್ಷದ ಒಗ್ಗಟ್ಟನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಅತ್ಯಂತ ನಿರ್ಣಾಯಕ ಎನಿಸಿಕೊಂಡಿದೆ. ಡಿ.ಕೆ. ಶಿವಕುಮಾರ್ ಅವರ ಹೆಸರೇ ಮುಂಚೂಣಿಯಲ್ಲಿದ್ದರೂ, ಪ್ರಜಾಪ್ರಭುತ್ವದ ನಿಯಮಾವಳಿಗಳ ಪ್ರಕಾರ ಸಭೆಯ ನಂತರವೇ ಹೈಕಮಾಂಡ್ ಅಧಿಕೃತ ಮುದ್ರೆ ಒತ್ತಲಿದೆ.
ಫ್ಲೈಟ್ನಲ್ಲೇ ಸಿದ್ಧವಾಯ್ತು ಸಚಿವರ ಪಟ್ಟಿ! ಇದೇ ಸಂದರ್ಭದಲ್ಲಿ ರಾಜಕೀಯ ವಲಯದಲ್ಲಿ ಮತ್ತೊಂದು ಸ್ವಾರಸ್ಯಕರ ಸುದ್ದಿ ಹರಿದಾಡುತ್ತಿದೆ. ದೆಹಲಿಗೆ ಪ್ರಯಾಣ ಬೆಳೆಸುವ ದಾರಿಯಲ್ಲಿ, ಅಂದರೆ ಫ್ಲೈಟ್ನಲ್ಲಿಯೇ ಕುಳಿತು ಡಿ.ಕೆ. ಶಿವಕುಮಾರ್ ಅವರು ತಮ್ಮ ಭಾವಿ ಸಚಿವ ಸಂಪುಟದ ಸಂಭಾವ್ಯ ಪಟ್ಟಿಯನ್ನು ಸಿದ್ಧಪಡಿಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಹೈಕಮಾಂಡ್ ಭೇಟಿಗೆ ಮುನ್ನವೇ ತಮ್ಮ ಆಪ್ತರು ಹಾಗೂ ಪ್ರಮುಖ ನಾಯಕರನ್ನೊಳಗೊಂಡ ಪಟ್ಟಿಯನ್ನು ರೆಡಿ ಮಾಡಿಕೊಂಡಿರುವ ಅವರು, ದೆಹಲಿ ತಲುಪುತ್ತಿದ್ದಂತೆ ವರಿಷ್ಠರ ಮುಂದೆ ಇದನ್ನು ಮಂಡಿಸಿ ಹಸಿರು ನಿಶಾನೆ ಪಡೆಯಲು ಸಂಪೂರ್ಣ ಸಿದ್ಧತೆ ನಡೆಸಿದ್ದಾರೆ.



