Published
3 months agoon
By
Akkare Newsಟಿಫಿನ್ ಬಾಕ್ಸ್‌ನಲ್ಲಿ ಮಾಂಸಹಾರ ತಂದಿದ್ದಕ್ಕಾಗಿ ಖಾಸಗಿ ಶಾಲೆಯೊಂದು ನರ್ಸರಿ ವಿದ್ಯಾರ್ಥಿಯನ್ನು ಅಮಾನತುಗೊಳಿಸಿದ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಮಕ್ಕಳ ಹಕ್ಕುಗಳ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್) ಅಮ್ರೋಹಾ ಜಿಲ್ಲಾಧಿಕಾರಿ ಅವರಿಗೆ ಆದೇಶಿಸಿದೆ. ಅಲ್ಲದೆ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು (ಸಿಡಬ್ಲ್ಯುಸಿ) ಹಿಲ್ಟನ್ ಕಾನ್ವೆಂಟ್ ಶಾಲೆಯ ಪ್ರಾಂಶುಪಾಲ ಅವಿನಾಶ್ ಕುಮಾರ್ ಶರ್ಮಾ ಅವರನ್ನು ಸಮಿತಿಯ ಮುಂದೆ ಹಾಜರಾಗುವಂತೆ ಕೇಳಿದೆ.
ಪ್ರಾಂಶುಪಾಲರು ಮತ್ತು ಮಗುವಿನ ತಾಯಿ ನಡುವೆ ತೀವ್ರ ವಾಗ್ವಾದದ ವಿಡಿಯೋ ವೈರಲ್ ಆದ ನಂತರ ವಿಷಯ ಬೆಳಕಿಗೆ ಬಂದಿದ್ದು, ಸಾರ್ವಜನಿಕರು ಪ್ರಾಂಶುಪಾಲರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಮುಸ್ಲಿಂ ಸಮುದಾಯದ ಹುಡುಗ ಶಾಲೆಯಲ್ಲಿ ಧಾರ್ಮಿಕ ಹೇಳಿಕೆಗಳನ್ನು ನೀಡುತ್ತಿದ್ದು, ಪ್ರತಿದಿನ ಮಾಂಸಾಹಾರಿ ಆಹಾರವನ್ನು ತರುತ್ತಿದ್ದನು ಎಂದು ಪ್ರಾಂಶುಪಾಲರು ಆರೋಪಿಸಿದ್ದಾರೆ.
“ನಮ್ಮ ದೇವಸ್ಥಾನಗಳನ್ನು ಕೆಡವುವ, ಶಾಲೆಗೆ ಮಾಂಸಾಹಾರ ತರುವ ಇಂತಹ ನೈತಿಕತೆ ಇಲ್ಲದ ಮಕ್ಕಳಿಗೆ ಕಲಿಸಲು ನಾವು ಬಯಸುವುದಿಲ್ಲ,” ಎಂದು ಪ್ರಾಂಶುಪಾಲರು ಮಗುವಿನ ತಾಯಿಗೆ ಹೇಳಿದ್ದು ವೀಡಿಯೊದಲ್ಲಿ ದಾಖಲಾಗಿದೆ. ಜೊತೆಗೆ ವಿದ್ಯಾರ್ಥಿಯು ಸಹ ವಿದ್ಯಾರ್ಥಿಗಳಿಗೆ ಮಾಂಸಾಹಾರಿ ಆಹಾರವನ್ನು ತಿನ್ನಿಸುವ ಬಗ್ಗೆ ಮಾತನಾಡಿದ್ದು, “ಅವರನ್ನು ಇಸ್ಲಾಂಗೆ ಪರಿವರ್ತಿಸುತ್ತಾನೆ” ಎಂದು ಅವರು ಆರೋಪಿಸಿದ್ದಾರೆ.
ಈ ಮಧ್ಯೆ, ಈ ಕುರಿತು ಹೊಸದಾಗಿ ತನಿಖೆ ನಡೆಸಿ 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಎನ್‌ಸಿಪಿಸಿಆರ್ ಗುರುವಾರ ಜಿಲ್ಲಾ ಮ್ಯಾಜಿಸ್ಟ್ರೇಟ್ ರಾಜೇಶ್ ಕುಮಾರ್ ತ್ಯಾಗಿ ಅವರಿಗೆ ಆದೇಶಿಸಿದೆ. ಜುವೆನೈಲ್ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, 2015 ರ ಅಡಿಯಲ್ಲಿ ಸಿಡಬ್ಲ್ಯೂಸಿ ಈ ಘಟನೆಯ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿತ್ತು.
ಅಲ್ಲದೆ, ಸಂತ್ರಸ್ತ ವಿದ್ಯಾರ್ಥಿಯ ತಾಯಿ ಅದೇ ಶಾಲೆಗೆ ಮೂವರು ಮಕ್ಕಳನ್ನು ಸೇರಿಸಿದ್ದಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. “ಆ ದಿನ ಶಾಲೆಯಲ್ಲಿ ನಡೆದ ಘಟನೆಯು ನನ್ನ ಎಲ್ಲ ಮಕ್ಕಳನ್ನು ಎಷ್ಟು ಬೆಚ್ಚಿಬೀಳಿಸಿದೆ ಎಂದರೆ ಅವರು ಈಗ ಶಾಲೆಗೆ ಹೋಗಲು ಸಹ ಹೆದರುತ್ತಾರೆ” ಎಂದು ಹೇಳಿದ್ದಾರೆ. ನನ್ನ ಮಕ್ಕಳಿಗೆ ನ್ಯಾಯ ಕೊಡಿಸಲು ನಾನು ನ್ಯಾಯಾಲಯದ ಮೊರೆ ಹೋಗುತ್ತೇನೆ ಎಂದು ಅವರು ಹೇಳಿದ್ದಾರೆ.