Published
2 months agoon
By
Akkare News
ಬೆಂಗಳೂರು ನಿವಾಸಿ ಸುಶ್ಮಾ (35) ಡೆಲ್ ಸಂಸ್ಥೆಯ ಉದ್ಯೋಗಿಯಾಗಿದ್ದರು. ಕಳೆದ ಐದು ವರ್ಷಗಳ ಹಿಂದೆ ಪುನೀತ್ ಕುಮಾರ್ ಎಂಬಾತನನ್ನು ವಿವಾಹವಾಗಿದ್ದರು. ಈ ದಂಪತಿಗೆ ನಾಲ್ಕು ವರ್ಷದ ಪುತ್ರನೂ ಇದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮನೆಯಲ್ಲಿ ಸಣ್ಣಪುಟ್ಟ ವಿಚಾರಗಳ ಕುರಿತಾಗಿ ಆಗಾಗ್ಗೆ ಕಲಹಗಳು ನಡೆಯುತ್ತಿದ್ದವು ಎನ್ನಲಾಗಿದೆ. ಮಂಗಳವಾರ ಅತ್ತೆ ಕಲ್ಪನಾರೊಂದಿಗೆ ಸುಶ್ಮಾರಿಗೆ ಅಡುಗೆ ಮಾಡುವ ವಿಚಾರದಲ್ಲಿ ವಾಗ್ವಾದ ಉಂಟಾಗಿತ್ತು. ಸುಶ್ಮಾ ಕುಟುಂಬದವರ ಆರೋಪದಂತೆ, ಆಕೆಯ ಅತ್ತೆ ಪದೇಪದೇ ಅಡುಗೆ ಮಾಡುವ ವಿಷಯದಲ್ಲಿ ಕಿರಿಕ್ ಮಾಡುತ್ತಿದ್ದು, ಇತರೆ ವಿಷಯಗಳಲ್ಲಿಯೂ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಇದರಿಂದ ಮಾನಸಿಕವಾಗಿ ನೊಂದಿದ್ದ ಸುಶ್ಮಾ, ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯ ನಂತರ ತಿಳಿಸಿದ್ದಾರೆ. ಇದೀಗ ವರದಕ್ಷಿಣೆ ಕಿರುಕುಳ ಆರೋಪದ ಮೇರೆಗೆ ಪತಿ ಪುನೀತ್ ಕುಮಾರ್ನನ್ನೂ ಪೊಲೀಸರು ಬಂಧಿಸಿದ್ದಾರೆ. ಪರಾರಿಯಾಗಿರುವ ಅತ್ತೆ ಕಲ್ಪನಾ ಬಂಧನಕ್ಕಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಘಟನೆಗೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಯ ಪೂರ್ವಾಪರ ವಿಚಾರಗಳನ್ನು ಪೊಲೀಸರು ಸವಿಸ್ತಾರವಾಗಿ ಪರಿಶೀಲಿಸುತ್ತಿದ್ದಾರೆ.