Published
1 month agoon
By
Akkare Newsಹಲ್ವಾ ಸೇರಿದಂತೆ ಕೇರಳದಿಂದ ಬರುವ ಹಲವು ಕುರುಕು ತಿಂಡಿಗಳಲ್ಲಿ ಕೃತಕ ಬಣ್ಣ ಬಳಸುತ್ತಿರುವ ಆರೋಪ ಕೇಳಿಬಂದ ಬಂದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಕೇರಳದ ಹಲ್ವಾ ಬಹಳ ಜನಪ್ರಿಯ ತಿಂಡಿಯಾಗಿದ್ದು, ನಿತ್ಯ ರೈಲಿನಲ್ಲಿ ಮಂಗಳೂರು, ಉಡುಪಿಯಿಂದ ಹಿಡಿದ ಮುಂಬಯಿ ತನಕ ಪೂರೈಕೆಯಾಗುತ್ತದೆ. ಶಬರಿಮಲೆ ಯಾತ್ರೆ ಸಹಿತ ಕೇರಳ ಪ್ರವಾಸ ಕೈಗೊಳ್ಳುವವರು ಈ ಹಲ್ವಾ ತಂದು ಹಂಚುವುದು ವಾಡಿಕೆ.
ಈಗಾಗಲೆ ಗೋಬಿಮಂಚೂರಿ, ಪಾನಿಪುರಿ, ಕೇಕ್ ಸೇರಿದಂತೆ ಅನೇಕ ತಿನಿಸುಗಳಿಗೆ ಬಳಸುವ ಮಸಾಲೆ ಪದಾರ್ಥಗಳು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತವೆ ಎಂದು ಪತ್ತೆಹಚ್ಚಲಾಗಿದೆ. ಈಗ ಕೇರಳದಿಂದ ಆಮದು ಆಗುವ ಖಾರಾ ಮಿಕ್ಸರ್, ಚಿಪ್ಸ್, ಹಲ್ವಾ, ಚಕ್ಕುಲಿ, ರಸ್ಕ್, ಡ್ರೈ ಫ್ರೂಟ್ಸ್ ಸೇರಿದಂತೆ 31 ಪದಾರ್ಥಗಳಲ್ಲಿ ಕೃತಕ ಬಣ್ಣ ಬಳಸಲಾಗುತ್ತಿದೆ. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕಳೆದ ಮೂರು ತಿಂಗಳುಗಳಲ್ಲಿ ಕೇರಳದಿಂದ ಗಡಿ ಜಿಲ್ಲೆ ಕೊಡಗಿನಲ್ಲಿ ಮಾರಾಟವಾಗುತ್ತಿದ್ದ ಖಾರಾ ಮಿಕ್ಸರ್, ಚಿಪ್ಸ್, ಹಲ್ವಾ, ಮುರುಕು, ರಸ್ಕ್, ಡ್ರೈ ಫೂಟ್ಸ್ಗಳು, ಸಿಹಿತಿಂಡಿಗಳು ಸೇರಿದಂತೆ ಹಲವು ವಿಧದ ಆಹಾರ ಪದಾರ್ಥಗಳ 90 ಮಾದರಿಗಳನ್ನು ಸಂಗ್ರಹಿಸಿ ಇಲಾಖೆ ಪರಿಶೀಲನೆ ನಡೆಸಿದೆ. ಅವುಗಳಲ್ಲಿ 31 ಮಾದರಿಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕವಾದ ಅಲುರ ರೆಡ್, ಕಾರ್ಮೋಸೈನ್, ಟರ್ಟ್ರಾನೈಸ್, ಸನ್‌ಸೆಟ್ ಯೆಲ್ಲೊ ಸೇರಿದಂತೆ ಕೃತಕ ಬಣ್ಣಗಳನ್ನು ಬಳಸಿರುವುದು ಪರೀಕ್ಷೆಯಲ್ಲಿ ಖಚಿವಾಗಿದೆ. ಹಲವಾರು ಆಹಾರ ಪದಾರ್ಥಗಳ ಪೊಟ್ಟಣಗಳ ಮೇಲೆ ತಯಾರಿಕಾ ದಿನಾಂಕ, ತಯಾರಿಕೆ ಮಾಡುವವರ ವಿವರಗಳು ಇಲ್ಲದೆ ಇರುವುದು ಪತ್ತೆಯಾಗಿದೆ.
ಈ ಎಲ್ಲ ಪದಾರ್ಥಗಳು ಆರೋಗ್ಯಕ್ಕೆ ಹಾನಿಕಾರಕ. ಹೀಗಾಗಿ, ಈ ಪದಾರ್ಥಗಳನ್ನು ತಯಾರಿಸುವ ತಯಾರಿಕ ಘಟಕಗಳ ಮೇಲೆ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಆಹಾರ ಸುರಕ್ಷತೆ ಮತ್ತು ಗಣಮಟ್ಟ ಇಲಾಖೆ ಆಯುಕ್ತರಿಗೆ ಮತ್ತು ಕೇರಳ ರಾಜ್ಯ ಸರ್ಕಾರಕ್ಕೆ ಅಧಿಕಾರಿಗಳು ಪತ್ರ ಬರೆದಿದ್ದಾರೆ.