ನಮ್ಮೊಂದಿಗೆ ಸಂಪರ್ಕ ಸಾಧಿಸಿ

ಇತರ

ಎಸ್.ಎಂ.ಕೃಷ್ಣ ದೂರದೃಷ್ಟಿ ಉಳ್ಳವರಾಗಿದ್ದರು: ವಿಧಾನ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ

Published

on

ಬೆಳಗಾವಿ: ಎಸ್.ಎಂ.ಕೃಷ್ಣ ಅವರು, ಮುತ್ಸದ್ದಿತನ, ದೂರದೃಷ್ಟಿ ಉಳ್ಳವರಾಗಿದ್ದರು. ದೀರ್ಘಕಾಲ ರಾಜಕಾರಣದಲ್ಲಿ‌ ಸಕ್ರಿಯರಾಗಿದ್ದರು.‌  ನಾನು ವಿದ್ಯಾರ್ಥಿ ಆಗಿದ್ದಾಗ ಎಸ್.ಎಂ.ಕೃಷ್ಣ ಅವರು ಕರೆದಿದ್ದ ಪ್ರಜಾ ಸೋಷಿಯಲಿಸ್ಟ್ ಪಾರ್ಟಿಯ ಸಭೆಯಲ್ಲಿ ಭಾಗವಹಿಸಿದ್ದೆ. ಬಳಿಕ ನಾನು ಲೋಹಿಯಾ ಅವರ ಸಮಾಜವಾದಿ ಪಕ್ಷ ಸೇರ್ಪಡೆಯಾದೆ.

 

ಎಸ್.ಎಂ.ಕೃಷ್ಣ ಅವರು 1962ರಲ್ಲೇ ಸ್ವತಂತ್ರವಾಗಿ ವಿಧಾನಸಭೆಗೆ ಸ್ಪರ್ಧಿಸಿದ್ದರು. ವಿಧಾನಸಭೆ, ವಿಧಾನ‌ ಪರಿಷತ್, ರಾಜ್ಯಸಭೆ, ಲೋಕಸಭೆ ನಾಲ್ಕೂ ಸದನಗಳ ಸದಸ್ಯರೂ ಆಗಿದ್ದು, ರಾಜ್ಯದ ಮುಖ್ಯಮಂತ್ರಿ, ವಿಧಾನಸಭೆ ಸ್ಪೀಕರ್, ಕೇಂದ್ರ ಸಚಿವರು ಹಾಗೂ ರಾಜ್ಯಪಾಲರೂ ಆಗಿದ್ದ ಅಪರೂಪದ ರಾಜಕಾರಣಿ ಎಂದು ಸಿಎಂ ಸಿದ್ದರಾಮಯ್ಯ ನೆನಪಿಸಿಕೊಂಡರು.

ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನಕ್ಕೆ ವಿಧಾನಸಭಾ ಅಧಿವೇಶನದಲ್ಲಿ ಸಂತಾಪದ ನುಡಿಗಳನ್ನಾಡಿದ  ಅವರು,  ಎಸ್.ಎಂ.ಕೃಷ್ಣ ಅವರು ಮಹಾರಾಷ್ಟ್ರ ರಾಜ್ಯಪಾಲರಾಗಿದ್ದಾಗಲೇ ನಾನು ಕಾಂಗ್ರೆಸ್ ಸೇರಿದ್ದು. ಅವರು ರಾಜ್ಯಪಾಲರಾಗಿದ್ದಾಗ ನಾನು ಅವರನ್ನು ಭೇಟಿಯಾಗಿ, ನಾನು ಕಾಂಗ್ರೆಸ್ ಸೇರುವ ತೀರ್ಮಾನವನ್ನು ಅವರಿಗೆ ತಿಳಿಸಿದೆ. ಅವರು ನನ್ನ ತೀರ್ಮಾನವನ್ನು ಸ್ವಾಗತಿಸಿದ್ದರು ಎಂದು ಸಿಎಂ ಹೇಳಿದರು.

ಒಳ್ಳೆ ಸಂಸದೀಯ ಪಟು, ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದರು‌. ಯಾವತ್ತೂ ದ್ವೇಷದ ರಾಜಕಾರಣ ಮಾಡಿದವರಲ್ಲ. ಅವರ ಕಾಲದಲ್ಲೇ ಡಾ.ರಾಜ್ ಕುಮಾರ್ ಅವರ ಅಪಹರಣ ಆಗಿತ್ತು, ಆ ಸಂದರ್ಭದ ದೊಡ್ಡ ಸವಾಲನ್ನು ಎದುರಿಸಿದ್ದರು. ಅದನ್ನು ಯಶಸ್ವಿಯಾಗಿ ನಿಭಾಯಿಸಿದ್ದರು ಎಂದು ಅವರು ಹೇಳಿದರು.

 

ಬೆಂಗಳೂರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ, ಸಿಂಗಾಪುರದಂತೆ ಮಾಡಬೇಕು ಎನ್ನುವ ಉದ್ದೇಶ ಹೊಂದಿದ್ದರು. ಬೆಂಗಳೂರಿಗೆ ಸಿಲಿಕಾನ್ ವ್ಯಾಲಿ ಆಫ್ ಇಂಡಿಯಾ ಎನ್ನುವ ಹೆಗ್ಗಳಿಕೆ ಬರಲು ಎಸ್.ಎಂ.ಕೃಷ್ಣ ಅವರ ಕೊಡುಗೆ ಅಪಾರ ಎಂದು ತಿಳಿಸಿದರು.

ಕಾಂಗ್ರೆಸ್ ಮೂಲಕ ಸುದೀರ್ಘ ರಾಜಕಾರಣ ಮಾಡಿ ಬಿಜೆಪಿ ಸೇರಿ ಒಂದು ವರ್ಷಕ್ಕೆ ರಾಜಕೀಯ ನಿವೃತ್ತಿ ಘೋಷಿಸಿದ ದಕ್ಷ ಆಡಳಿತಗಾರ, ಸಜ್ಜನ-ಮುತ್ಸದ್ದಿ ರಾಜಕಾರಣಿ ಆಗಿದ್ದರು.  ಅವರ ಅಗಲಿಕೆ ನೋವುಂಟು ಮಾಡಿದೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.


 

 

 

 

 

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version