Published
3 weeks agoon
By
Akkare Newsಕೇವಲ ಎಂಟು ದಿನಗಳ ಭೇಟಿಗೆ ತೆರಳಿ 9 ತಿಂಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ(ಐಎಸ್ಎಸ್) ಸಿಲುಕಿದ್ದ ಅಮೆರಿಕದ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಮತ್ತು ತಂಡ ಕೊನೆಗೂ ಸುರಕ್ಷಿತವಾಗಿ ಭೂಮಿಗೆ ಹಿಂದಿರುಗಿದೆ.
ನಿರೀಕ್ಷೆಯಂತೆ ಅಮೆರಿಕದ ಸ್ಥಳೀಯ ಕಾಲಮಾನ ಮಾರ್ಚ್ 18, 2025 ಸಂಜೆ 5.57 ಮತ್ತು ಭಾರತೀಯ ಕಾಲಮಾನ ಮಾರ್ಚ್ 19, 2025 ಮುಂಜಾನೆ 3.27ಕ್ಕೆ ಅಮೆರಿಕ ಕರಾವಳಿಯ ಫ್ಲೋರಿಡಾದ ತಲ್ಲಾಹಸ್ಸೀಯಲ್ಲಿ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್, ನಿಕ್ ಹೇಗ್ ಮತ್ತು ಅಲೆಕ್ಸಾಂಡರ್ ಗೋರ್ಬುನೋವ್ ಅವರನ್ನು ಹೊತ್ತ ಸ್ಪೇಸ್ ಎಕ್ಸ್ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಲ್ಯಾಂಡ್ ಆಗಿದೆ.
ಪ್ಯಾರಚೂಟ್‌ಗಳ ಸಹಾಯದಿಂದ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಸಮುದ್ರದ ಮೇಲೆ ಇಳಿಯುತ್ತಿದ್ದಂತೆ ರಕ್ಷಣಾ ಬೋಟ್‌ಗಳು ಸಮೀಪಕ್ಕೆ ಧಾವಿಸಿತು. ಬಾಹ್ಯಾಕಾಶ ನೌಕೆಯಲ್ಲಿದ್ದ ಗಗನಯಾನಿಗಳು ಬೋಟ್‌ಗೆ ಸ್ಥಳಾಂತರಗೊಂಡರು. ನಂತರ ಅವರನ್ನು ದಡಕ್ಕೆ ಕರೆ ತರಲಾಯಿತು.
ಸುರಕ್ಷಿತವಾಗಿ ಲ್ಯಾಂಡ್ ಆದ ಬಳಿಕ ಗಗನಯಾನಿಗಳು ಹೂಸ್ಟನ್‌ನಲ್ಲಿರುವ ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರಕ್ಕೆ ತೆರಳಿದ್ದಾರೆ. ಅಲ್ಲಿ ಅವರು ಕುಟುಂಬಸ್ಥರನ್ನು ಭೇಟಿಯಾಗಿದ್ದಾರೆ ಎಂದು ನಾಸಾ ತಿಳಿಸಿದೆ.
ನಿನ್ನೆ (ಮಾ.18) ಬೆಳಿಗ್ಗೆ 10:35ಕ್ಕೆ (ಭಾರತೀಯ ಕಾಲಮಾನ) ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಐಎಸ್‌ಎಸ್‌ನಿಂದ ಹೊರಟಿತ್ತು. ಡ್ರ್ಯಾಗನ್ ಐಎಸ್‌ಎಸ್‌ನಿಂದ ಬೇರ್ಪಡುವ ವಿಡಿಯೋವನ್ನು ಹಂಚಿಕೊಂಡಿದ್ದ ನಾಸಾ, ಮುಂದಿನ 17 ಗಂಟೆಗಳಲ್ಲಿ ಅದು ಭೂಮಿಗೆ ತಲುಪಲಿದೆ ಎಂದಿತ್ತು. ಅದರಂತೆ ಸರಿಯಾದ ಸಮಯಕ್ಕೆ ತಲುಪಿದೆ.
ಬಾಹ್ಯಾಕಾಶ ನೌಕೆಯಿಂದ ಹೊರ ಬಂದ ಬಳಿಕ ಸುನಿತಾ ಮತ್ತು ಬುಚ್ ಕೈ ಬೀಸುತ್ತಾ, ನಗುತ್ತಾ ತೆರಳಿದ್ದಾರೆ. ಬಾಹ್ಯಾಕಾಶ ಮತ್ತು ಭೂಮಿಯ ವಾತಾವರಣ ವ್ಯತಿರಿಕ್ತವಾಗಿ ಇರುವುದರಿಂದ ಅವರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ. ಹಾಗಾಗಿ, ನಾಸಾ ಅವರ ಆರೋಗ್ಯದ ಮೇಲೆ ನಿಗಾ ಇಡಲಿದೆ ಎನ್ನಲಾಗಿದೆ.
ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಕಳೆದ ವರ್ಷ (2024) ಜೂನ್ 5ರಂದು, ಬೋಯಿಂಗ್ ಸಂಸ್ಥೆಯ ಸ್ಟಾರ್‌ಲೈನರ್ ಗಗನನೌಕೆಯಲ್ಲಿ ಐಎಸ್‌ಎಸ್‌ನತ್ತ ಪ್ರಯಾಣ ಬೆಳೆಸಿದ್ದರು. 8 ದಿನಗಳ ನಂತರ ಅವರು ಭೂಮಿಗೆ ಮರಳಬೇಕಿತ್ತು. ಆದರೆ, ಗಗನನೌಕೆಯಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಅವರಿಗೆ ಮರಳಲು ಸಾಧ್ಯವಾಗದೆ ಅಲ್ಲೇ ಉಳಿದುಕೊಂಡಿದ್ದರು.
ಹಿಂದಿರುಗುವ ಸಮಸ್ಯೆ ಉಂಟಾದ ನಡುವೆಯೂ, ಸುನಿತಾ ಮತ್ತು ಬುಚ್ ಅವರನ್ನು ನಾಸಾ ಸ್ಪೇಸ್‌ಎಕ್ಸ್‌ನ ಕ್ರೂ-9 ಕಾರ್ಯಾಚರಣೆಗೆ ಮರು ನಿಯೋಜಿಸಿತ್ತು. ಇವರಿಬ್ಬರಿಗೆ ಸ್ಥಳಾವಕಾಶ ಕಲ್ಪಿಸುವ ಸಲುವಾಗಿ ನಾಲ್ವರ ಬದಲಿಗೆ ಇಬ್ಬರು ಸಿಬ್ಬಂದಿಯೊಂದಿಗೆ ಸೆಪ್ಟೆಂಬರ್‌ನಲ್ಲಿ ಸ್ಪೇಸ್‌ಎಕ್ಸ್‌ನ ಕ್ರೂ-9 ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ನಾಸಾ ಐಎಸ್‌ಎಸ್‌ಗೆ ಕಳುಹಿಸಿತ್ತು.
ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ತೆರಳಿದ 9 ತಿಂಗಳ ನಂತರ ಕಳೆದ ಭಾನುವಾರ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಹೊತ್ತ ಸ್ಪೇಸ್‌ಎಕ್ಸ್‌ನ ಕ್ರೂ-10 ಮಿಷನ್ (SpaceX’s Crew-10) ಐಎಸ್‌ಎಸ್ ತಲುಪಿತ್ತು. ಆ ಬಳಿಕ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್, ಸ್ಪೇಸ್‌ಎಕ್ಸ್‌ನ ಕ್ರೂ-9ನಲ್ಲಿ ತೆರಳಿದ್ದ ನಾಸಾದ ನಿಕ್ ಹೇಗ್ ಮತ್ತು ಅಲೆಕ್ಸಾಂಡರ್ ಗೋರ್ಬುನೋವ್ ಭೂಮಿಗೆ ಮರಳಿದ್ದಾರೆ.
ಸ್ಪೇಸ್‌ಎಕ್ಸ್‌ನ ಕ್ರೂ-10 ಮಿಷನ್‌ನಲ್ಲಿ ತೆರಳಿದ ನಾಲ್ವರು ಗಗಯಾನಿಗಳಾದ ನಾಸಾದ ಆ್ಯನ್ ಮೆಕ್ಲೇನ್ ಮತ್ತು ನಿಕೋಲ್ ಆಯೆರ್ಸ್, ಜಪಾನ್‌ನ ತಕುಯಾ ಒನಿಶಿ ಹಾಗೂ ರಷ್ಯಾದ ಕಿರಿಲ್ ಪೆಸ್ಕೊವ್ ಅವರು ಕೆಲ ದಿನಗಳ ಕಾಲ ಐಎಸ್‌ಎಸ್‌ನಲ್ಲಿ ಉಳಿಯಲಿದ್ದಾರೆ.