Published
2 days agoon
By
Akkare Newsಪುತ್ತೂರು,:ಕರಾವಳಿ ಭಾಗದ ಅನೇಕ ಕಡೆಗಳಲ್ಲಿ ಶನಿವಾರ ಸಂಜೆ ಬಳಿಕ ಗುಡುಗು, ಗಾಳಿ ಸಹಿತ ಉತ್ತಮ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬೆಳಗ್ಗೆಯೇ ಮೋಡದಿಂದ ಕೂಡಿದ ವಾತಾವರಣ ಇತ್ತು. ಪುತ್ತೂರು ನಗರದಲ್ಲಿ ಸಂಜೆ ವೇಳೆ ಮಳೆಯಾಗಿದೆ.
ಬಲ್ನಾಡು, ಬೆಟ್ಟಂಪಾಡಿ, ಬಡಗನ್ನೂರು, ಕಡಬ, ಆಲಂಕಾರು, ಉಪ್ಪಿನಂಗಡಿ, ಹಿರೇಬಂಡಾಡಿ, ಬೆಳ್ತಂಗಡಿ, ಬಂದಾರು, ಕರಿಕ್ಕಳ, ಸುಳ್ಯ, ಪುಣಚ, ಬಾಯಾರು, ಬಂಟ್ವಾಳ ಸಹಿತ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾದ ವರದಿಯಾಗಿದೆ.
ಉರಿ ಸೆಕೆ, ಎರಡು ದಿನ ಎಲ್ಲೋ ಅಲರ್ಟ್
ಮಂಗಳೂರು ನಗರದಲ್ಲಿ ಬೆಳಗ್ಗೆ ಮೋಡ ಇದ್ದ ಕಾರಣ ದಿನವಿಡೀ ಉರಿ ಸೆಕೆ ಮುಂದುವರಿದಿತ್ತು. ನಗರದಲ್ಲಿ 34.1 ಡಿ.ಸೆ. ಗರಿಷ್ಠ ತಾಪಮಾನ ಮತ್ತು 25 ಡಿ.ಸೆ. ಕನಿಷ್ಠ ಉಷ್ಣಾಂಶ ದಾಖಲಾಗಿತ್ತು. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಎ. 6 ಮತ್ತು 7ರಂದು ಗುಡುಗು ಸಹಿತ ಉತ್ತಮ ಮಳೆಯಾಗುವ ಸಾಧ್ಯತೆ ಇದ್ದು, ಕರಾವಳಿಯಲ್ಲಿ “ಎಲ್ಲೋ ಅಲರ್ಟ್’ ಘೋಷಿಸಲಾಗಿದೆ.
ಪಂಜ, ಸುಬ್ರಹ್ಮಣ್ಯದಲ್ಲಿ ಮಳೆ
ಸುಳ್ಯ/ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಹಾಗೂ ಸುಳ್ಯ ತಾಲೂಕಿನ ಪಂಜ ಪರಿಸರದಲ್ಲಿ ಶನಿವಾರ ಅಪರಾಹ್ನ ಉತ್ತಮ ಮಳೆಯಾಗಿದೆ.
ಸುಳ್ಯ ತಾಲೂಕಿನ ಪಂಜ, ನಿಂತಿಕಲ್ಲು, ಕಲ್ಮಡ್ಕ, ಕರಿಕ್ಕಳ, ಪಂಜ, ಕುಕ್ಕೆ ಸುಬ್ರಹ್ಮಣ್ಯ, ಕುಲ್ಕುಂದ, ಕೈಕಂಬ, ಬಿಳಿನೆಲೆ ಪರಿಸರದಲ್ಲಿ ಗುಡುಗು ಸಹಿತ ಗಾಳಿ ಮಳೆಯಾಗಿದೆ. ಸುಳ್ಯ ನಗರದಲ್ಲಿ ಮೋಡ ಕವಿದ ವಾತಾವರಣ ಕಂಡುಬಂದಿದೆ.
ಕಡಬ: ಮುರಿದು ಬಿದ್ದ ಮರಗಳು; ಅಪಾರ ಹಾನಿ
ಕಡಬ: ಶನಿವಾರ ಸಂಜೆ ಕಡಬ ಪರಿಸರದಲ್ಲಿ ಗಾಳಿಯೊಂದಿಗೆ ಸುರಿದ ಬಿರುಸಿನ ಮಳೆಯ ಕಾರಣದಿಂದಾಗಿ ಮರಗಳು ಹಾಗೂ ವಿದ್ಯುತ್ ಕಂಬಗಳು ಮುರಿದು ಬಿದ್ದು ಅಪಾರ ಹಾನಿ ಸಂಭವಿಸಿದೆ. ಕಡಬ-ಪಂಜ, ಸಿರಿಬಾಗಿಲು ಗ್ರಾಮ, ಕೋಡಿಂಬಾಳದಿಂದ ಕೋರಿಯಾರ್ ಭಾಗ ಸಂಪರ್ಕಿಸುವ ರಸ್ತೆಯಲ್ಲಿ ಸಮಸ್ಯೆಯಾಯಿತು. ಕಲ್ಲಂತಡ್ಕ ವಿದ್ಯಾನಗರದ ಬಳಿ ಹಸೈನಾರ್, ಕೋಡಿಂಬಾಳದ ಉಂಡಿಲದ ದಾಮೋದರ ಅವರ ಮನೆಗೆ ಮರ ಬಿದ್ದು ಹಾನಿಯಾಗಿದೆ. ಅಲ್ಲಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ಮುರಿದು ಬಿದ್ದು ಹಾನಿಯಾಗಿದೆ. ಕೋಡಿಂಬಾಳ ತಂಗುದಾಣದ ಶೀಟ್‌ಗಳು ಹಾರಿ ಹೋಗಿದೆ. ಕಡಬ ಪೇಟೆಯಾದ್ಯಂತ ವಿವಿಧ ಕಾರ್ಯಕ್ರಮಗಳ ಪ್ರಚಾರಾರ್ಥ ಅಳವಡಿಸಲಾಗಿದ್ದ ಫ್ಲೆಕ್ಸ್, ಬ್ಯಾನರ್‌ಗಳು ಗಾಳಿಯ ರಭಸಕ್ಕೆ ಫ್ರೇಮ್ ಸಮೇತ ನೆಲಕ್ಕುರುಳಿ ಹರಿದು ಚಿಂದಿಯಾಗಿದೆ.