Published
2 months agoon
By
Akkare News
ಹವಾಮಾನ ಇಲಾಖೆ ಭಾರೀ ಮಳೆಯ ಬಗ್ಗೆ ಎಚ್ಚರಿಕೆ ನೀಡಿದೆ. ದಕ್ಷಿಣ ಭಾರತದಲ್ಲಿ ಮಳೆಯ ಅಬ್ಬರ ಜೋರಿರಲಿದೆ. ಹೀಗಾಗಿ ಎಲ್ಲೆಲ್ಲಿ ಮಳೆಯಾಗಲಿದೆ ಅನ್ನೋದರ ವಿವರ ಈ ಸುದ್ದಿಯಲ್ಲಿದೆ.
ದೇಶಾದ್ಯಂತ ಹವಾಮಾನ ಬದಲಾಗಿದೆ. ಉತ್ತರ ಮತ್ತು ಮಧ್ಯ ಭಾರತದಾದ್ಯಂತ ಮೂಳೆ ಕೊರೆಯುವಂತಹ ಚಳಿ ಮತ್ತು ದಟ್ಟವಾದ ಮಂಜು ಇದ್ದರೆ, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಕೆಲ ರಾಜ್ಯಗಳಲ್ಲಿ ಇಂದಿನಿಂದ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಮುಂಜಾನೆಯೇ ಮಳೆಯಾಗಿದ್ದು, ಹೀಗಾಗಿ ಇಂದು ಎಲ್ಲೆಲ್ಲಿ ಮಳೆಯಾಗಲಿದೆ ಅನ್ನೋದರ ವಿವರ ಈ ಸುದ್ದಿಯಲ್ಲಿದೆ.
ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಅನೇಕ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಬಲವಾದ ಗಾಳಿ ಬೀಸುತ್ತಿದೆ. ಹವಾಮಾನ ಇಲಾಖೆಯ ಪ್ರಕಾರ, ಬಂಗಾಳ ಕೊಲ್ಲಿಯಲ್ಲಿನ ಆಳವಾದ ವಾಯುಭಾರ ಕುಸಿತದಿಂದಾಗಿ (ಈಗ ದುರ್ಬಲವಾಗಿದ್ದರೂ) ಕರಾವಳಿ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ. ಇಂದು ಎಲ್ಲೆಲ್ಲಿ ಮಳೆಯಾಗಲಿದೆ ಅನ್ನೋದನ್ನು ಈ ಕೆಳಗೆ ತಿಳಿದುಕೊಳ್ಳಿ.
ಮತ್ತೊಂದೆಡೆ, ದಕ್ಷಿಣ ಭಾರತದಲ್ಲಿ ಭಾರೀ ಮಳೆ ಮತ್ತು ಬಿರುಗಾಳಿ ತರಹದ ಪರಿಸ್ಥಿತಿಗಳು ಮುಂದುವರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳುತ್ತದೆ. ಹವಾಮಾನ ಇಲಾಖೆಯ ಪ್ರಕಾರ, ಮುಂದಿನ ಕೆಲವು ದಿನಗಳವರೆಗೆ ಉತ್ತರ ಭಾರತದ ರಾಜ್ಯಗಳಲ್ಲಿ ಚಳಿಯಿಂದ ಮುಕ್ತಿ ಸಿಗುವ ಭರವಸೆ ಕಡಿಮೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿದ್ದ ಆಳವಾದ ವಾಯುಭಾರ ಕುಸಿತವು ದುರ್ಬಲಗೊಂಡಿದೆ. ಹವಾಮಾನ ಇಲಾಖೆಯ ಪ್ರಕಾರ, ಈ ಹವಾಮಾನ ವ್ಯವಸ್ಥೆಯು ತಮಿಳುನಾಡಿನ ಚೆನ್ನೈ, ಚೆಂಗಲ್ಪಟ್ಟು, ತಿರುವಲ್ಲೂರು, ಕಾಂಚಿಪುರಂ, ವಿಲ್ಲುಪುರಂ, ಕಲ್ಲಕುರಿಚಿ, ಅರಿಯಲೂರು, ತಂಜಾವೂರು, ಪುದುಕೊಟ್ಟೈ ಮತ್ತು ರಾಮನಾಥಪುರಂ ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಚೆನ್ನೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂದು ಮೋಡ ಕವಿದ ವಾತಾವರಣವಿರಲಿದೆ.
ಜನವರಿ 11 ರಂದು ತಮಿಳುನಾಡಿನ ಪ್ರತ್ಯೇಕ ಪ್ರದೇಶಗಳಿಗೆ ಭಾರೀ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ. ಜನವರಿ 12 ರವರೆಗೆ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಗುಡುಗು ಸಹಿತ ಮತ್ತು ಮಿಂಚು ಸಹ ಬೀಳುವ ಸಾಧ್ಯತೆ ಇದೆ. ನೈಋತ್ಯ ಬಂಗಾಳಕೊಲ್ಲಿ ಮತ್ತು ಶ್ರೀಲಂಕಾ ಕರಾವಳಿಯಲ್ಲಿ ಗಂಟೆಗೆ 45-55 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಗಂಟೆಗೆ 65 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.
ಕರ್ನಾಟಕದಲ್ಲಿ ಕೂಡ ಮಳೆ ಕಂಡು ಬಂದಿದ್ದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಮುಂಜಾನೆಯಿಂದಲೇ ತುಂತುರು ಮಳೆ ಬರುತ್ತಿದೆ. ಸದ್ಯ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇದೆ. ಮಧ್ಯಾಹ್ನ ನಂತರ ಮಳೆಯಾಗುವ ಸಾಧ್ಯತೆ ಇದೆ. ಉಳಿದಂತೆ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಸೇರಿದಂತೆ ರಾಜ್ಯದ ಕರಾವಳಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದೆ.