Published
4 months agoon
By
Akkare News
ರಾಜ್ಯದಲ್ಲಿ ಮಳೆ ಪ್ರಮಾಣ ಕೆಲವು ದಿನಗಳಿಂದ ಕಡಿಮೆಯಾಗಿದೆ. ಆದರೂ ಮೋಡಕವಿದ ವಾತಾವರಣವಿದ್ದು, ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಚಳಿ ಆರಂಭವಾಗಿದೆ. ಚಳಿಗಾಲ ಆರಂಭವಾಗುವ ಸಮಯದಲ್ಲಿ, ಮಳೆ ಏಕೆ ಬರುತ್ತಿದೆ ಎಂಬ ಪ್ರಶ್ನೆ ಎಲ್ಲರಲ್ಲಿತ್ತು.
ಇದೀಗ ಮತ್ತೆ ಹವಾಮಾನ ಇಲಾಖೆ ಮಳೆ ಮುನ್ಸೂಚನೆ (Rain Alert) ನೀಡಿದೆ. ಈ ಹಿನ್ನೆಲೆ ನವೆಂಬರ್ 17 ರಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಮತ್ತೆ ಶುರು ವರುಣನ ಅಬ್ಬರ!
ಹೌದು, ನವೆಂಬರ್ 17 ರಿಂದ ಎರಡು ದಿನಗಳ ಕಾಲ ಮಳೆಯಾಗಲಿದೆ ಎಂದು ಹೇಳಲಾಗಿದ್ದು, ಕರ್ನಾಟಕದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನು ದಕ್ಷಿಣ ಕನ್ನಡ, ಚಾಮರಾಜನಗರ, ಚಿಕ್ಕಮಗಳೂರು, ಉತ್ತರ ಕನ್ನಡ, ಉಡುಪಿ, ಮೈಸೂರು, ಹಾಸನ, ಕೊಡಗು, ಶಿವಮೊಗ್ಗದಲ್ಲಿ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ ಕೆಲವು ದಿನಗಳವರೆಗೆ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದೇ ರೀತಿ ಕಲಬುರಗಿ, ಬಳ್ಳಾರಿ, ವಿಜಯಪುರ, ಯಾದಗಿರಿ, ಬೀದರ್, ಕೊಪ್ಪಳ, ರಾಯಚೂರು, ಬಾಗಲಕೋಟೆ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.ಚೆನ್ನೈ ನಗರದಲ್ಲೂ ಪ್ರಸ್ತುತ ಮಳೆ ವಾತಾವರಣವಿದ್ದು, ಈ ವಾರಾಂತ್ಯದಲ್ಲಿ ಇನ್ನಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಯಾವುದೇ ಅಲರ್ಟ್ ಘೋಷಣೆಯಾಗಿಲ್ಲ. ಇನ್ನು ನವೆಂಬರ್ 16 ಮತ್ತು 17 ರ ಭಾನುವಾರ ಮತ್ತು ಸೋಮವಾರಕ್ಕೆ ಮುಂಚಿತವಾಗಿ ಎರಡು ದಿನಗಳ ಮಳೆ ಎಚ್ಚರಿಕೆ ನೀಡಲಾಗಿದೆ.
ಭಾರತೀಯ ಹವಾಮಾನ ಇಲಾಖೆ (IMD) ಮುಂದಿನ ಎರಡು ದಿನಗಳವರೆಗೆ ಚೆನ್ನೈನಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಆದ್ದರಿಂದ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ಹವಾಮಾನ ಇಲಾಖೆ ತನ್ನ ಅಧಿಕೃತ ಹೇಳಿಕೆಯಲ್ಲಿ, “ತಮಿಳುನಾಡು, ಕೇರಳ ಮತ್ತು ದ್ವೀಪ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ” ಎಂದು ತಿಳಿಸಿದೆ. “ನವೆಂಬರ್ 12, 17 ಮತ್ತು 18 ರಂದು ತಮಿಳುನಾಡಿನಲ್ಲಿ, ನವೆಂಬರ್ 12 ಮತ್ತು 13 ರಂದು ಕೇರಳ ಮತ್ತು ಮಾಹೆಯಲ್ಲಿ, ಹಾಗೂ ನವೆಂಬರ್ 17 ಮತ್ತು 18 ರಂದು ಕರಾವಳಿ ಆಂಧ್ರಪ್ರದೇಶ, ಯಾನಂ ಮತ್ತು ರಾಯಲಸೀಮಾದ ಪ್ರದೇಶಗಳಲ್ಲಿ ಹಗುರದಿಂದ ಸಾಧಾರಣ ಮಳೆ, ಕೆಲವೊಮ್ಮೆ ಗುಡುಗು ಸಹಿತ ಮಳೆಯಾಗಬಹುದು” ಎಂದು IMD ಹೇಳಿದೆ.
ಅಷ್ಟೇ ಅಲ್ಲದೇ, “ನವೆಂಬರ್ 12 ಮತ್ತು 17 ರಂದು ತಮಿಳುನಾಡಿನಲ್ಲಿ, ನವೆಂಬರ್ 12 ರಿಂದ 14 ರವರೆಗೆ ಕೇರಳ ಮತ್ತು ಮಾಹೆಯಲ್ಲಿ, ಹಾಗೂ ನವೆಂಬರ್ 17 ಮತ್ತು 18 ರಂದು ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನ ಕರ್ನಾಟಕದಲ್ಲಿ ಮಿಂಚು ಸಹಿತ ಗುಡುಗು ಮಳೆಯಾಗುವ ಸಾಧ್ಯತೆಯಿದೆ” ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.