Published
10 months agoon
By
Akkare News
ಪುತ್ತೂರು: 2028ರ ಪುತ್ತೂರು ವಿಧಾನ ಸಭಾ ಚುನಾವಣೆಯಲ್ಲಿ ಪುತ್ತಿಲ ಪರಿವಾರದ ಮುಖ್ಯಸ್ಥ ಅರುಣ್ ಕುಮಾರ್ ಪುತ್ತಿಲ ಅವರು ಮತ್ತೆ ಸ್ಪರ್ಧೆ ಮಾಡ್ತಾರಾ? ಹೀಗೊಂದು ಪ್ರಶ್ನೆ ಪುತ್ತೂರಿನಲ್ಲಿ ಅಟಲ್ ವಿರಾಸತ್ ಕಾರ್ಯಕ್ರಮ ನಡೆದ ಬಳಿಕ ಭಾರೀ ಚರ್ಚೆಯಲ್ಲಿದೆ.


ಇದಕ್ಕೆ ಪೂರಕವೆಂಬಂತೆ ‘ಪುತ್ತೂರಿಗೆ ಪುತ್ತಿಲ’ ಎನ್ನುವ ಅರುಣ್ ಕುಮಾರ್ ಪುತ್ತಿಲ ಅವರ ಪೋಟೋ ಇರುವ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು ಪುತ್ತಿಲ ಅವರ ಬೆಂಬಲಿಗರು, ಅಭಿಮಾನಿಗಳು ಮತ್ತೊಮ್ಮೆ ಅರುಣ್ ಕುಮಾರ್ ಪುತ್ತಿಲ ಅವರನ್ನು ಅಭ್ಯರ್ಥಿಯಾಗಿಸಲು ಈಗಲೇ ಅಭಿಯಾನ ಆರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ.


ನ.19ರಂದು ಪುತ್ತೂರಿನಲ್ಲಿ ಅಟಲ್ ವಿರಾಸತ್ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಭಾಗವಹಿಸಿದ್ದರೂ ಅರುಣ್ ಕುಮಾರ್ ಪುತ್ತಿಲ ಗೈರಾಗಿದ್ದರು. ಮನೆ ಮನೆಗೆ ಆಹ್ವಾನ ನೀಡಿದ್ದರೂ, ನಮಗೆ ಯಾರೂ ಆಹ್ವಾನ ನೀಡಿರಲಿಲ್ಲ ಎಂದು ಅರುಣ್ ಕುಮಾರ್ ತಿಳಿಸಿದ್ದಾರೆ. ಅರುಣ್ ಕುಮಾರ್ ಪುತ್ತಿಲ ಅವರಿಗೆ ಕರೆ ಮಾಡಿದರೂ ಅವರು ಕರೆ ಸ್ವೀಕರಿಸಿಲ್ಲ ಎಂದು ಎಂಎಲ್ಸಿ ಕಿಶೋರ್ ಕುಮಾರ್ ಬೊಟ್ಯಾಡಿ ತಿಳಿಸಿದ್ದಾರೆ.
ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲವಿನ ಸಮೀಪಕ್ಕೆ ಬಂದಿದ್ದ ಅರುಣ್ ಕುಮಾರ್ ಪುತ್ತಿಲ ಅವರು 2028ರ ವಿಧಾನ ಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರಾ? ಅಥವಾ ಸದ್ಯ ಇರುವ ಅಸಮಾಧಾನ, ವೈಮನಸ್ಸು, ಗೊಂದಲಗಳನ್ನು ಬಗೆಹರಿಸಿ ಬಿಜೆಪಿ ಮತ್ತು ಪುತ್ತಿಲ ಪರಿವಾರ ಒಂದಾಗುತ್ತಾ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ. ಒಟ್ಟಿನಲ್ಲಿ ಬಿಜೆಪಿ ಮತ್ತು ಪುತ್ತಿಲ ಪರಿವಾರದ ನಡುವಿನ ಮುನಿಸು ಮುಂದುವರಿದಿರುವ ಲಕ್ಷಣಗಳು ಗೋಚರಿಸುತ್ತಿದ್ದು ಮುಂದಕ್ಕೆ ಯಾವೆಲ್ಲಾ ಬದಲಾವಣೆಗಳಾಗಲಿದೆ ಎನ್ನುವುದು ಕಾದು ನೋಡಬೇಕಿದೆ.



