Published
15 hours agoon
By
Akkare News
ನವದೆಹಲಿ: ಪ್ರೀತಿಯ ನಾಟಕವಾಡಿ, ಧರ್ಮ ಮರೆಮಾಚಿ ದಲಿತ ಮಹಿಳೆಯೊಬ್ಬರನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದಲ್ಲದೆ, ಬಲವಂತವಾಗಿ ಧರ್ಮ ಮತಾಂತರಕ್ಕೆ ಯತ್ನಿಸಿದ ಬೆಚ್ಚಿಬೀಳಿಸುವ ಘಟನೆಯೊಂದು ರಾಜಧಾನಿ ದೆಹಲಿಯ ಬಾಟ್ಲಾ ಹೌಸ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಸಂತ್ರಸ್ತೆಯ ದೂರಿನ ಮೇರೆಗೆ ಜಾಮಿಯಾ ನಗರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ದೆಹಲಿ, ಮೀರತ್ನಲ್ಲಿ ಕ್ರೂರ ಚಿತ್ರಹಿಂಸೆ 2022 ರಲ್ಲಿ ಆರೋಪಿಯು ಮಹಿಳೆಯನ್ನು ಬಾಟ್ಲಾ ಹೌಸ್ಗೆ ಕರೆಸಿಕೊಂಡು ಅಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಅಷ್ಟಕ್ಕೇ ನಿಲ್ಲದೆ, ಆಕೆಯನ್ನು ಅಲ್ಲಿಂದ ಮೀರತ್ಗೆ ಕರೆದೊಯ್ದು ಮತ್ತೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ. ಆರೋಪಿ ಫಹೀಮ್ ಮತ್ತು ಆತನ ಸಂಬಂಧಿಕರು ಅಕ್ರಮ ಶಸ್ತ್ರಾಸ್ತ್ರ ವ್ಯವಹಾರದಲ್ಲಿ ಭಾಗಿಯಾಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದು, ಆಕೆಯನ್ನು ಹೆದರಿಸಲು ರಕ್ತದಲ್ಲಿ ನೆನೆಸುವುದು ಮತ್ತು ಮೈಮೇಲೆ ಪ್ರಾಣಿಗಳ ಮಾಂಸವನ್ನು ಸುರಿಯುವಂತಹ ವಿಕೃತ ಮತ್ತು ಕ್ರೂರ ಚಿತ್ರಹಿಂಸೆಗಳನ್ನು ನೀಡುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬಳಿಕ ತಸ್ಲೀಮ್ ಮೌಲ್ವಿ ಎಂಬಾತನ ಮೂಲಕ ಬಲವಂತದ ಧರ್ಮ ಮತಾಂತರಕ್ಕೂ ಒತ್ತಡ ಹೇರಲಾಗಿತ್ತು ಎಂದು ಮಹಿಳೆ ಹೇಳಿದ್ದಾರೆ.
ನಾಲ್ವರು ಆರೋಪಿಗಳು ಕಟಕಟೆಗೆ: ಮಹಿಳೆ ನೀಡಿದ ಗಂಭೀರ ದೂರಿನ ಆಧಾರದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾದ ಆಗ್ನೇಯ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. “ಬಾಟ್ಲಾ ಹೌಸ್ ಪ್ರದೇಶದಲ್ಲಿ ಮಹಿಳೆಯ ಮೇಲೆ ದೌರ್ಜನ್ಯ ನಡೆದಿರುವ ಕುರಿತು ಜಾಮಿಯಾ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಳ್ಳಲಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.



