ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ರಸ್ತೆ ಗುಂಡಿಯಿಂದಾಗಿ ಸಂಭವಿಸಿದ ಅಪಘಾತದಲ್ಲಿ 32 ವರ್ಷದ ಮೇಧಾ ಎಂಬ ಯುವತಿ ದಾರುಣವಾಗಿ ಮೃತಪಟ್ಟಿದ್ದಾರೆ. ಕೆಲಸ ಮುಗಿಸಿ ಸ್ನೇಹಿತನ ಜೊತೆ ಬೈಕ್ನಲ್ಲಿ ತೆರಳುತ್ತಿದ್ದಾಗ, ಮುಂದೆ ಹೋಗುತ್ತಿದ್ದ ಕಾರು ಗುಂಡಿ ತಪ್ಪಿಸಲು ಏಕಾಏಕಿ ಬ್ರೇಕ್ ಹಾಕಿದೆ. ಇದರಿಂದ ಬೈಕ್ ಕೂಡ ಬ್ರೇಕ್ ಹಾಕಿದ್ದು, ಹಿಂಬದಿಯಲ್ಲಿದ್ದ ಮೇಧಾ ರಸ್ತೆಗೆ ಬಿದ್ದಿದ್ದಾರೆ. ಇದೇ ವೇಳೆ ಹಿಂಬದಿಯಿಂದ ವೇಗವಾಗಿ ಬಂದ ಗೂಡ್ಸ್ ವಾಹನ ಅವರ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಸ್ತೆ ಗುಂಡಿಗಳಿಂದ ಅಮಾಯಕರು ಬಲಿಯಾಗುತ್ತಿದ್ದರೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.