Connect with us

ಸ್ಥಳೀಯ

ಗೋಕರ್ಣ: ಕಡಲತೀರದಲ್ಲಿ ಭಾರಿ ಅಲೆಗೆ ಸಿಲುಕಿ ಬೆಂಗಳೂರಿನ ಮೂವರು ಐಟಿ ಉದ್ಯೋಗಿಗಳ ಸಾವು

Published

on

ಗೋಕರ್ಣ: ಕಡಲನಗರಿ ಗೋಕರ್ಣಕ್ಕೆ ಬಂದಿದ್ದ ಬೆಂಗಳೂರಿನ ಖಾಸಗಿ ಕಂಪನಿಯೊಂದರ ಉದ್ಯೋಗಿಗಳ ಪ್ರವಾಸ ದುರಂತವಾಗಿ ಕೊನೆಗೊಂಡಿದೆ. ಗೋಕರ್ಣದ ದುಬ್ಬಣಶಶಿ ಕಡಲತೀರದಲ್ಲಿ  ಈಜಲು ತೆರಳಿದ್ದ ಐವರು ಭಾರಿ ಅಲೆಗೆ ಸಿಲುಕಿ ಕೊಚ್ಚಿಹೋಗಿದ್ದು, ಘಟನೆಯಲ್ಲಿ ಮೂವರು ದುರ್ಮರಣಕ್ಕೀಡಾಗಿದ್ದಾರೆ.

ಬೆಂಗಳೂರಿನ ಬೆಳ್ಳಂದೂರಿನಲ್ಲಿರುವ ‘ಅಲೋರಿಕಾ ಇಕೋಸ್ಪೇಸ್’  ಕಂಪನಿಯ 16 ಉದ್ಯೋಗಿಗಳ ತಂಡವು ವಾರಾಂತ್ಯದ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಆಗಮಿಸಿತ್ತು. ದುಬ್ಬಣಶಶಿ ಬೀಚ್ ಬಳಿಯ ಕೋಜೆ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದ ಈ ತಂಡದ ಕೆಲವರು ಸಮುದ್ರದ ನೀರಿನಲ್ಲಿ ಆಟವಾಡಲು ಇಳಿದಿದ್ದರು. ಈ ವೇಳೆ ಏಕಾಏಕಿ ಭಾರಿ ಅಲೆಯೊಂದು ಅಪ್ಪಳಿಸಿ ಐವರು ನೀರುಪಾಲಾಗಿದ್ದರು. ಸಮುದ್ರದಲ್ಲಿ ಪ್ರವಾಸಿಗರು ಸಿಲುಕಿರುವುದನ್ನು ಕಂಡ ರೆಸಾರ್ಟ್ ನ ಜೀವರಕ್ಷಕ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ತಕ್ಷಣವೇ ಕಾರ್ಯಾಚರಣೆ ನಡೆಸಿ ನಾಲ್ವರನ್ನು ದಡಕ್ಕೆ ತಂದಿದ್ದಾರೆ.

ಮೃತಪಟ್ಟವರ ವಿವರ:
 
ಶೋಭಾ ದಾಸ್ (22): ಮೂಲತಃ ಜಾರ್ಖಂಡ್ ನವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದರು. ತೀವ್ರ ಅಸ್ವಸ್ಥಗೊಂಡಿದ್ದ ಇವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
 
ಮಹಮ್ಮದ್ ಅಕ್ರಮ್ (ತಂಡದ ನಾಯಕ): ಇವರ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಕೊನೆಯುಸಿರೆಳೆದಿದ್ದಾರೆ.

ವಿಶ್ವ / ವಿಶ್ವೇಶ್ (24): ಬೆಂಗಳೂರಿನ ಕಲ್ಯಾಣನಗರದ ನಿವಾಸಿಯಾಗಿದ್ದ ವಿಶ್ವ ಸಮುದ್ರದಲ್ಲಿ ನಾಪತ್ತೆಯಾಗಿದ್ದರು. ಬಳಿಕ ನಡೆಸಿದ ಸುದೀರ್ಘ ಶೋಧ ಕಾರ್ಯಾಚರಣೆಯಲ್ಲಿ ಇವರ ಮೃತದೇಹ ಪತ್ತೆಯಾಗಿದೆ.
 
ಅಪಾಯದಿಂದ ಪಾರಾದ ನಿಶಾಂತ್ ಡಿ.ವಿ. ಹಾಗೂ ಮಹಮ್ಮದ್ ಖಾಸಿಂ ಎಂಬ ಇಬ್ಬರು ಉದ್ಯೋಗಿಗಳನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದು, ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಗೋಕರ್ಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಾರವಾರ ವೈದ್ಯಕೀಯ ಕಾಲೇಜಿನ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಘಟನೆಯ ಬೆನ್ನಲ್ಲೇ ಕರಾವಳಿ ಪ್ರದೇಶಗಳಲ್ಲಿ ಸಮುದ್ರದ ಅಲೆಗಳ ತೀವ್ರತೆ ಹೆಚ್ಚಿರುವಾಗ ನೀರಿಗಿಳಿಯುವುದು ಅಪಾಯಕಾರಿ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಪ್ರವಾಸಿಗರ ಸುರಕ್ಷತೆ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಗೋಕರ್ಣ ವ್ಯಾಪ್ತಿಯ ರೆಸಾರ್ಟ್ ಹಾಗೂ ಹೋಮ್ಸ್ಟೇ ಮಾಲೀಕರಿಗೆ ಪೊಲೀಸರು ಎಚ್ಚರಿಕೆ ಹಾಗೂ ಸೂಚನೆ ನೀಡಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement