Published
7 hours agoon
By
Akkare News
ಪಂದ್ಯ ಡ್ರಾ ಆದ ಬೆನ್ನಲ್ಲೇ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಆಡುವ 11ರ ಬಳಗದಿಂದ ಕೈಬಿಟ್ಟ ನಾಯಕ ಶುಭ್ಮನ್ ಗಿಲ್ ಹಾಗೂ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ನಿರ್ಧಾರದ ವಿರುದ್ಧ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಮಾಜಿ ದಿಗ್ಗಜ ಎಬಿ ಡಿವಿಲಿಯರ್ಸ್ ಕೂಡ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಸಿರಾಜ್ ಪಾತ್ರವನ್ನು ಮರೆತ ಆಯ್ಕೆಗಾರರು: ಎಬಿಡಿ ಅಸಮಾಧಾನ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಈ ಕುರಿತು ಮಾತನಾಡಿರುವ ಎಬಿ ಡಿವಿಲಿಯರ್ಸ್, ಆರ್ಸಿಬಿ ತಂಡದಲ್ಲಿ ಸಿರಾಜ್ ಅವರೊಂದಿಗೆ ದೀರ್ಘಕಾಲ ಆಡಿದ ಅನುಭವವನ್ನು ಸ್ಮರಿಸಿಕೊಂಡಿದ್ದಾರೆ. ‘ಸಿರಾಜ್ ಅವರ ಇತ್ತೀಚಿನ ಅಂಕಿಅಂಶಗಳು ಅಷ್ಟೇನೂ ಆಕರ್ಷಕವಾಗಿಲ್ಲದಿರಬಹುದು ಮತ್ತು ಅವರು ಸದ್ಯ ಫಾರ್ಮ್ ಕಳೆದುಕೊಂಡಿರಬಹುದು. ಆದರೆ ಭಾರತ ತಂಡದಲ್ಲಿ ಅವರು ನಿಭಾಯಿಸುವ ಪಾತ್ರ ಅತ್ಯಂತ ಅಮೂಲ್ಯವಾದುದು. ಈ ನಿರ್ಧಾರ ತೆಗೆದುಕೊಂಡ ಕೋಚ್ ಅಥವಾ ಆಯ್ಕೆಗಾರರು ತಂಡದಲ್ಲಿ ಸಿರಾಜ್ ಅವರ ನಿಜವಾದ ಪಾತ್ರವನ್ನೇ ಮರೆತುಬಿಟ್ಟಿದ್ದಾರೆ,’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊಹಮ್ಮದ್ ಸಿರಾಜ್ ಓರ್ವ ದಣಿವರಿಯದ ಬೌಲರ್ ಆಗಿದ್ದು, ಅವರ ನಿರಂತರ ದಾಳಿಯಿಂದಾಗಿಯೇ ಜಸ್ಪ್ರೀತ್ ಬುಮ್ರಾ ಮತ್ತು ಇತರ ವೇಗಿಗಳಿಗೆ ಮುಕ್ತವಾಗಿ ಬೌಲಿಂಗ್ ಮಾಡಲು ಸಾಧ್ಯವಾಗುತ್ತದೆ ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ. ಇದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.






