Connect with us

ಇಲಾಖಾ ಮಾಹಿತಿ

ಜನನ-ಮರಣ: 21 ದಿನಗಳೊಳಗೆ ನೋಂದಣಿ ಕಡ್ಡಾಯ: ಅಪರ ಜಿಲ್ಲಾಧಿಕಾರಿ

Published

on

ಮಂಗಳೂರು: ಪ್ರತಿಯೊಂದು ಜನನ-ಮರಣದ ನೋಂದಣಿ ಕಡ್ಡಾಯವಾಗಿದ್ದು, ಘಟನೆ ಸಂಭವಿಸಿದ 21 ದಿನಗಳೊಳಗೆ ಸಂಬಂಧಪಟ್ಟ ವಾರಸುದಾರರು ನಗರ/ಗ್ರಾಮ ಪಂಚಾಯತ್‌ ನೋಂದಣಾಧಿಕಾರಿಗಳ ಮೂಲಕ ನೋಂದಣಿ ಮಾಡಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಜಿ. ಸಂತೋಷ್‌ ಕುಮಾರ್‌ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಜನನ-ಮರಣ ನೋಂದಣಿ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಹೊರ ಜಿಲ್ಲೆಯ ವ್ಯಕ್ತಿ ಅಪಘಾತ ಅಥವಾ ಇನ್ನಿತರ ಅಪರಾಧ ಕೃತ್ಯಗಳ ಮೂಲಕ ಸಾವನ್ನಪ್ಪಿದರೆ ಮರಣ ನೋಂದಣಿಯನ್ನು ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ನಿಖರ ಮಾಹಿತಿ ಮತ್ತು ಅಗತ್ಯ ದಾಖಲೆಗಳನ್ನು ನೀಡಬೇಕು ಎಂದು ಪೊಲೀಸ್‌ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.


ವಿಳಂಬ ಸಲ್ಲದು

ಗ್ರಾಮಾಂತರ ಮತ್ತು ನಗರ ಪ್ರದೇಶದಲ್ಲಿ 678 ನೋಂದಣಿ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಜನನ ಮತ್ತು ಮರಣ ನೋಂದಣಿಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. 21 ದಿನದ ಅನಂತರ ನೋಂದಾಯಿಸಿದರೆ ಅದನ್ನು ತಡವಾದ ನೋಂದಣಿ ಎಂದು ಪರಿಗಣಿಸಿ, ವಿಳಂಬ ಶುಲ್ಕ 20 ರೂ. ಪಡೆಯಲಾಗುತ್ತದೆ. ಈ ವಿಳಂಬ ನೋಂದಣಿಯನ್ನು ಕಡಿಮೆಗೊಳಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಸೂಚಿಸಿದರು.

.ತಾಲೂಕು ಮಟ್ಟದಲ್ಲಿ ಸಭೆ
ತಾಲೂಕು ಮಟ್ಟದಲ್ಲಿ ಜನನ-ಮರಣ ನೋಂದಣಿ ಸಮನ್ವಯ ಸಮಿತಿ ಸಭೆಯನ್ನು ನಡೆಸಬೇಕು ಎಂದವರು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು. ಜನನ ಮತ್ತು ಮರಣದ ದಾಖಲೆಗಳು ಹಾಳಾಗದಂತೆ ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು ಎಂದು ಪಟ್ಟಣ ಪಂಚಾಯತ್‌ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಇಲಾಖೆಗಳಿಗೆ ಅವರು ನಿರ್ದೇಶಿಸಿದರು.


ಗ್ರಾಮ ವನ್‌ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎ.ಆರ್‌. ಶ್ರೀಧರ್‌ ಮಾತನಾಡಿ, ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಸಂಭವಿಸುವ ಎಲ್ಲ ಜನನ ಮತ್ತು ಮರಣ ಘಟನೆಗಳನ್ನು ನೋಂದಣಾಧಿಕಾರಿಗಳಿಗೆ ವರದಿ ಮಾಡಬೇಕು. ನೋಂದಣಾಧಿಕಾರಿಗಳು ಅಥವಾ ಉಪನೋಂದಣಾಧಿಕಾರಿಗಳು ವರದಿ ಮಾಡಿದ ಘಟನೆಗಳನ್ನು ನೋಂದಣಿ ಪ್ರಕ್ರಿಯೆ ಮುಗಿದ ಅನಂತರ ಮಾಹಿತಿದಾರರಿಗೆ ಜನನ ಪ್ರಮಾಣ ಪತ್ರವನ್ನು ಒದಗಿಸಬೇಕು. ಗ್ರಾಮ ವನ್‌ ಕಚೇರಿಯಲ್ಲಿ ಸಾರ್ವಜನಿಕರು ಜನನ-ಮರಣ ನೋಂದಣಿಗೆ ಅರ್ಜಿ ಸಲ್ಲಿಸಬಹುದು ಎಂದರು.

ಸಭೆಯಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣ ಇಲಾಖೆ ಉಪನಿರ್ದೇಶಕಿ ಸುಮಾ ಕೆ.ಎಸ್‌., ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್‌ ಎ. ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

 

Continue Reading
Click to comment

Leave a Reply

Your email address will not be published. Required fields are marked *

Advertisement