Published
6 hours agoon
By
Akkare News
ದಕ್ಷಿಣಕನ್ನಡ: ಪುತ್ತೂರು ಉಪ್ಪಿನಂಗಡಿ ರಸ್ತೆಯ ಬೊಳುವಾರಿನಿಂದ ಸೇಡಿಯಾಪುವರೆಗೆ ಚತುಷ್ಪಥ ಕಾಂಕ್ರೀಟಿಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಹಾರಾಡಿ ರೈಲ್ವೇ ಸೇತುವೆಯ ಕೆಳಬದಿ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿ ಪ್ರಾರಂಭಿಸಬೇಕಿದ್ದು, ಈ ಭಾಗದಲ್ಲಿ ರಸ್ತೆಯು ಕಿರಿದಾಗಿದ್ದು ದ್ವಿಮುಖ ವಾಹನ ಸಂಚಾರ ಅಸಾಧ್ಯವಾಗಿರುವುದರಿಂದ ಈ ಭಾಗದಲ್ಲಿ ಕಾಮಗಾರಿ ನಡೆಸಲು ದಿನಾಂಕ:18.06.2026 ರಿಂದ 18.07.2026 (ಒಂದು ತಿಂಗಳು) ರವರೆಗೆ ವಾಹನಗಳ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ಈ ಸಂಬಂಧ ದಕ್ಷಿಣಕನ್ನಡ ಜಿಲ್ಲಾಧಿಕಾರಿ ದರ್ಶನ್ .ಹೆಚ್. ವಿ ಸರಕಾರಿ ಆದೇಶ ಹೊರಡಿಸಿದ್ದಾರೆ. 
ಪುತ್ತೂರಿನಿಂದ ಉಪ್ಪಿನಂಗಡಿಗೆ ಹೋಗುವ ಮತ್ತು ಬರುವ ವಾಹನಗಳಿಗೆ ಬದಲಿ ರಸ್ತೆಯಲ್ಲಿ ಸಂಚರಿಸುವಂತೆ ಕ್ರಮಕೈಗೊಂಡು ಕಾಮಗಾರಿ ನಿರ್ವಹಿಸಲು ಅನುವು ಮಾಡಿಕೊಡುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಉಪವಿಭಾಗ, ಪುತ್ತೂರು ಇವರು ಕೋರಿರುವ ಹಿನ್ನೆಲೆಯಲ್ಲಿ ಪುತ್ತೂರು – ಉಪ್ಪಿನಂಗಡಿ ರಸ್ತೆಯ ಬೊಳುವಾರಿನಿಂದ ಸೇಡಿಯಾಪುವರೆಗೆ ಚತುಷ್ಪಥ ಕಾಂಕ್ರೀಟಿಕರಣ ಕಾಮಗಾರಿಯ ಅವಧಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಹಾಗೂ ವಾಹನ ಸಂಚಾರದ ಸುರಕ್ಷತೆಯನ್ನು ಪರಿಗಣಿಸಿ, ಪುತ್ತೂರು-ಉಪ್ಪಿನಂಗಡಿ ರಸ್ತೆಯ ಹಾರಾಡಿ ರೈಲ್ವೇ ಸೇತುವೆಯ ಕೆಳಭಾಗದ ರಸ್ತೆಯಲ್ಲಿ ದಿನಾಂಕ:18.06.2026 ರಿಂದ 18.07.2026 ರವರೆಗೆ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ, ಕೆಳಕಂಡ ಬದಲಿ ಮಾರ್ಗಗಳಲ್ಲಿ ವಾಹನಗಳಿಗೆ ಸಂಚರಿಸಲು ಆದೇಶವನ್ನು ಹೊರಡಿಸುವಂತೆ ಕೋರಿ ಉಪವಿಭಾಗಾಧಿಕಾರಿಗಳು, ಪುತ್ತೂರು ಉಪವಿಭಾಗ, ಪುತ್ತೂರು ರವರು ಉಲ್ಲೇಖದಂತೆ ಈ ಕಛೇರಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ.

ಈ ಸಂಬಂಧ ಎಲ್ಲಾ ರೀತಿಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪುತ್ತೂರು ಸಹಾಯಕ ಆಯುಕ್ತರಿಗೆ ಸೂಚನೆಯನ್ನು ನೀಡಿದ್ದು, ಪ್ರಯಾಣಿಕರಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಕ್ರಮ ವಹಿಸುವಂತೆ ಸೂಚಿಸಿದ್ದಾರೆ. 




