Connect with us

ಇತ್ತೀಚಿನ ಸುದ್ದಿಗಳು

ಜೂನ್ 18 ರಿಂದ 1 ತಿಂಗಳ ಕಾಲ ಪುತ್ತೂರಿನ ಈ ರಸ್ತೆಯಲ್ಲಿ ಸಂಚಾರ ನಿಷೇಧ

Published

on

​ದಕ್ಷಿಣಕನ್ನಡ: ಪುತ್ತೂರು ಉಪ್ಪಿನಂಗಡಿ ರಸ್ತೆಯ ಬೊಳುವಾರಿನಿಂದ ಸೇಡಿಯಾಪುವರೆಗೆ ಚತುಷ್ಪಥ ಕಾಂಕ್ರೀಟಿಕರಣ ಕಾಮಗಾರಿ ಪ್ರಗತಿಯಲ್ಲಿದ್ದು, ಹಾರಾಡಿ ರೈಲ್ವೇ ಸೇತುವೆಯ ಕೆಳಬದಿ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿ ಪ್ರಾರಂಭಿಸಬೇಕಿದ್ದು, ಈ ಭಾಗದಲ್ಲಿ ರಸ್ತೆಯು ಕಿರಿದಾಗಿದ್ದು ದ್ವಿಮುಖ ವಾಹನ ಸಂಚಾರ ಅಸಾಧ್ಯವಾಗಿರುವುದರಿಂದ ಈ ಭಾಗದಲ್ಲಿ ಕಾಮಗಾರಿ ನಡೆಸಲು ದಿನಾಂಕ:18.06.2026 ರಿಂದ 18.07.2026 (ಒಂದು ತಿಂಗಳು) ರವರೆಗೆ ವಾಹನಗಳ ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ಈ ಸಂಬಂಧ ದಕ್ಷಿಣಕನ್ನಡ ಜಿಲ್ಲಾಧಿಕಾರಿ ದರ್ಶನ್ .ಹೆಚ್‌. ವಿ ಸರಕಾರಿ ಆದೇಶ ಹೊರಡಿಸಿದ್ದಾರೆ.

 

​ ಪುತ್ತೂರಿನಿಂದ ಉಪ್ಪಿನಂಗಡಿಗೆ ಹೋಗುವ ಮತ್ತು ಬರುವ ವಾಹನಗಳಿಗೆ ಬದಲಿ ರಸ್ತೆಯಲ್ಲಿ ಸಂಚರಿಸುವಂತೆ ಕ್ರಮಕೈಗೊಂಡು ಕಾಮಗಾರಿ ನಿರ್ವಹಿಸಲು ಅನುವು ಮಾಡಿಕೊಡುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್, ಲೋಕೋಪಯೋಗಿ ಇಲಾಖೆ, ಉಪವಿಭಾಗ, ಪುತ್ತೂರು ಇವರು ಕೋರಿರುವ ಹಿನ್ನೆಲೆಯಲ್ಲಿ ಪುತ್ತೂರು – ಉಪ್ಪಿನಂಗಡಿ ರಸ್ತೆಯ ಬೊಳುವಾರಿನಿಂದ ಸೇಡಿಯಾಪುವರೆಗೆ ಚತುಷ್ಪಥ ಕಾಂಕ್ರೀಟಿಕರಣ ಕಾಮಗಾರಿಯ ಅವಧಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ಹಾಗೂ ವಾಹನ ಸಂಚಾರದ ಸುರಕ್ಷತೆಯನ್ನು ಪರಿಗಣಿಸಿ, ಪುತ್ತೂರು-ಉಪ್ಪಿನಂಗಡಿ ರಸ್ತೆಯ ಹಾರಾಡಿ ರೈಲ್ವೇ ಸೇತುವೆಯ ಕೆಳಭಾಗದ ರಸ್ತೆಯಲ್ಲಿ ದಿನಾಂಕ:18.06.2026 ರಿಂದ 18.07.2026 ರವರೆಗೆ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ, ಕೆಳಕಂಡ ಬದಲಿ ಮಾರ್ಗಗಳಲ್ಲಿ ವಾಹನಗಳಿಗೆ ಸಂಚರಿಸಲು ಆದೇಶವನ್ನು ಹೊರಡಿಸುವಂತೆ ಕೋರಿ ಉಪವಿಭಾಗಾಧಿಕಾರಿಗಳು, ಪುತ್ತೂರು ಉಪವಿಭಾಗ, ಪುತ್ತೂರು ರವರು ಉಲ್ಲೇಖದಂತೆ ಈ ಕಛೇರಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ.

​ ಒಂದು ತಿಂಗಳ ಕಾಲ ಈ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ನಿಶೇಧಿಸಿರುವ ಹಿನ್ನಲೆಯಲ್ಲಿ ವಾಹನಗಳಿಗೆ ಬದಲಿ ರಸ್ತೆಗಳ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದ್ದು, ಈ ವ್ಯವಸ್ಥೆ ಜೂನ್ 18 ರಿಂದ ಜಾರಿಗೆ ಬರಲಿದೆ. 1. ಪುತ್ತೂರಿನಿಂದ ಉಪ್ಪಿನಂಗಡಿ ಕಡೆಗೆ ಸಂಚರಿಸುವ ವಾಹನಗಳು ಪುತ್ತೂರು ಖಾಸಗಿ ಬಸ್ ನಿಲ್ದಾಣ ಮಾರ್ಗವಾಗಿ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯ ಮೂಲಕ ಕೋಟೆಚಾ ಹಾಲ್ ಮುಖಾಂತರ ಉಪ್ಪಿನಂಗಡಿ ರಸ್ತೆಯನ್ನು ಸಂಪರ್ಕಿಸುವುದು. 2. ಉಪ್ಪಿನಂಗಡಿಯಿಂದ ಪುತ್ತೂರು ಕಡೆಗೆ ಸಂಚರಿಸುವ ವಾಹನಗಳು ಕೋಟಿಚಾ ಹಾಲ್ ಮೂಲಕ ಎ.ಪಿ.ಎಂ.ಸಿ. ರಸ್ತೆಯಾಗಿ ಪುತ್ತೂರು ಮುಖ್ಯ ರಸ್ತೆಯನ್ನು ಸಂಪರ್ಕಿಸುವುದು. 3. ಉಪ್ಪಿನಂಗಡಿ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ಪಡೀಲ್ ಜಂಕ್ಷನ್ ಮೂಲಕ ನಗರ ಮಾರ್ಗದಲ್ಲಿ ಸಂಚರಿಸುವುದು. ಈ ಸಂಬಂಧ ಎಲ್ಲಾ ರೀತಿಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪುತ್ತೂರು ಸಹಾಯಕ ಆಯುಕ್ತರಿಗೆ ಸೂಚನೆಯನ್ನು ನೀಡಿದ್ದು, ಪ್ರಯಾಣಿಕರಲ್ಲಿ ಯಾವುದೇ ಗೊಂದಲ ಉಂಟಾಗದಂತೆ ಕ್ರಮ ವಹಿಸುವಂತೆ ಸೂಚಿಸಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version