ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಶಿಕ್ಷಣ ಕ್ಷೇತ್ರದಲ್ಲಿನ ಅಕ್ರಮಗಳ ವಿರುದ್ಧ ನಡೆದ ದೇಶವ್ಯಾಪಿ ವಿದ್ಯಾರ್ಥಿ ಚಳವಳಿಯ ಪ್ರಮುಖ ಮುಖಗಳಲ್ಲಿ ಒಬ್ಬರಾಗಿರುವ ಅಖಿಲ ಭಾರತ ವಿದ್ಯಾರ್ಥಿ ಸಂಘದ (AISA) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ, ಕೇಂದ್ರದ ಮಾಜಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಯನ್ನು ಸ್ವಾಗತಿಸಿದರೂ, ಅದೊಂದರಿಂದ ಹೋರಾಟ ಮುಗಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಧಾನ್ ರಾಜೀನಾಮೆಯ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಂಭ್ರಮಾಚರಣೆಯ ವಿಡಿಯೋ ಹಂಚಿಕೊಂಡಿರುವ ನೇಹಾ ಬೋರಾ, “If I can’t dance, It won’t be my revolution!” ಎಂಬ ಸಂದೇಶದೊಂದಿಗೆ ಅದನ್ನು ಪೋಸ್ಟ್ ಮಾಡಿದ್ದಾರೆ. ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್ ಅವರ ಯೂಟ್ಯೂಬ್ ಕಾರ್ಯಕ್ರಮ ‘ದಿಲ್ ಸೇ’ ಯಲ್ಲಿ ಮಾತನಾಡಿದ ನೇಹಾ, “ಈ ಪ್ರಧಾನ್ ಅವರ ಜಾಗಕ್ಕೆ ಇನ್ನೊಬ್ಬ ಪ್ರಧಾನ್ ಬರಬಹುದು. ಇದು ಒಬ್ಬ ವ್ಯಕ್ತಿಯ ರಾಜೀನಾಮೆಯ ವಿಚಾರವಲ್ಲ. ಸಾಮಾನ್ಯ ಜನರನ್ನು ಮತ್ತೆ ಮತ್ತೆ ವಿಫಲಗೊಳಿಸುವ ವ್ಯವಸ್ಥೆಯನ್ನು ಅಹಂಕಾರದಿಂದ ನಡೆಸಲು ಸಾಧ್ಯವಿಲ್ಲ. ಬಿಜೆಪಿ ಅಥವಾ ಆರ್‌ಎಸ್‌ಎಸ್ ನಾಯಕರಿಗೆ ಚಾಮರ ಬೀಸಿದವರಿಗೆ ಸಚಿವ ಸ್ಥಾನ ಬಹುಮಾನವಾಗಬಾರದು” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ವಿದ್ಯಾರ್ಥಿ ಚಳವಳಿ ಕೇವಲ ಒಂದು ರಾಜೀನಾಮೆಯಲ್ಲಿ ಕೊನೆಗೊಳ್ಳುವ ಹೋರಾಟವಲ್ಲ; ಇನ್ನಷ್ಟು ರಾಜೀನಾಮೆಗಳ ಸರಣಿಗೆ ನಾಂದಿ ಹಾಡಿದ ಹೋರಾಟವಾಗಿ ಇತಿಹಾಸ ನೆನಪಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಇದೇ ವೇಳೆ, ಧರ್ಮೇಂದ್ರ ಪ್ರಧಾನ್ ಅವರನ್ನು ಮತ್ತೊಂದು ಸಚಿವಾಲಯಕ್ಕೆ ವರ್ಗಾಯಿಸಿದರೂ ಅದು ವಿದ್ಯಾರ್ಥಿಗಳ ಮುಖ್ಯ ಆಕ್ಷೇಪವಲ್ಲ ಎಂದು ನೇಹಾ ಬೋರಾ ಅಭಿಪ್ರಾಯಪಟ್ಟಿದ್ದಾರೆ. ವ್ಯಕ್ತಿಯ ಬದಲಾವಣೆಯಷ್ಟೇ ಸಾಕಾಗುವುದಿಲ್ಲ; ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಭೂತ ಸುಧಾರಣೆ ಆಗಬೇಕು ಎಂಬುದು ವಿದ್ಯಾರ್ಥಿಗಳ ಹೋರಾಟದ ಉದ್ದೇಶ. ಹಾಗೆಯೇ ಈ ಹೋರಾಟ ಜೈಲಿನಲ್ಲಿರುವ ಹಲವಾರು ಕಾಕ್ರೋಚ್‌ಗಳನ್ನು ಬಿಡುಗಡೆ ಮಾಡಿಸುವವರೆಗೂ ಮುಂದುವರೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಜುಲೈ 20ರಂದು ಸಂಸತ್ ಚಲೋ ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಲಾಠಿಚಾರ್ಜ್ ಮತ್ತು ಬಲಪ್ರಯೋಗಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾರಾಜಕೀಯ ಹೊಣೆ ಹೊತ್ತು ಉತ್ತರಿಸಬೇಕು. ವಿದ್ಯಾರ್ಥಿಗಳ ಮೇಲೆ ನಡೆದ ಹಿಂಸಾಚಾರಕ್ಕೆ ಕೇವಲ ಪೊಲೀಸ್ ಸಿಬ್ಬಂದಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗದು. ದೆಹಲಿ ಪೊಲೀಸ್ ಆಯುಕ್ತರು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಈ ಘಟನೆಗೆ ಜವಾಬ್ದಾರರಾಗಬೇಕು” ಎಂದು ನೇಹಾ ಆಗ್ರಹಿಸಿದ್ದಾರೆ. “ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಕಲಾ ಮತ್ತು ಸೌಂದರ್ಯಶಾಸ್ತ್ರ ವಿಭಾಗದ ಪಿಎಚ್‌ಡಿ ಸಂಶೋಧಕಿಯಾಗಿರುವ ನೇಹಾ ಬೋರಾ, ಜಂತರ್ ಮಂತರ್‌ನಲ್ಲಿ ನಡೆದ ಉಪವಾಸ ಸತ್ಯಾಗ್ರಹದಲ್ಲಿ 23 ದಿನಗಳ ಕಾಲ ಭಾಗವಹಿಸಿದ್ದರು. ಈ ಅವಧಿಯಲ್ಲಿ ಸುಮಾರು 7.5 ಕೆ.ಜಿ. ತೂಕ ಕಳೆದುಕೊಂಡಿದ್ದಲ್ಲದೆ, ರಕ್ತದಲ್ಲಿನ ಸಕ್ಕರೆಯ ಪ್ರಮಾಣವೂ ಅಪಾಯದ ಮಟ್ಟಕ್ಕೆ ಇಳಿದಿತ್ತು ಎಂದು ವರದಿಯಾಗಿದೆ.ಉಪವಾಸದ ನಡುವೆಯೂ ಅವರು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ವಿಡಿಯೊಗಳನ್ನು ಹಂಚಿಕೊಳ್ಳುತ್ತಾ ಯುವಜನರನ್ನು ಹೋರಾಟಕ್ಕೆ ಸೆಳೆಯುವ ಪ್ರಯತ್ನ ನಡೆಸಿದ್ದರು. ಒಂದು ವಿಡಿಯೊದಲ್ಲಿ, “ಇಂದು ನನ್ನ ಮನಸ್ಸಿನಲ್ಲಿ ಹಸಿವಿನ ವಿಚಾರವೇ ಇದೆ. ಆಹಾರಕ್ಕಾಗಿ ನನಗಿರುವ ಹಸಿವಿನಷ್ಟೇ, ನರೇಂದ್ರ ಮೋದಿ ಸರ್ಕಾರಕ್ಕೆ ಅಧಿಕಾರದ ಹಸಿವು ಇದೆ”ಎಂದು ವ್ಯಂಗ್ಯವಾಡಿದ್ದರು. ಜುಲೈ 20ರಂದು ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆದ ಬಳಿಕ ವೇದಿಕೆಯಿಂದ ಮಾತನಾಡಿದ್ದ ನೇಹಾ ಬೋರಾ, “ಶಾಂತಿಯುತ ಪ್ರತಿಭಟನಾಕಾರರ ಮೇಲೆ ಮಾಡಿದ ಪ್ರತಿಯೊಂದು ಗಾಯವೂ ಒಂದು ದಿನ ಈ ಅಹಂಕಾರಿ ಸರ್ಕಾರದ ಪತನಕ್ಕೆ ಕಾರಣವಾಗಲಿದೆ” ಎಂದು ಎಚ್ಚರಿಕೆ ನೀಡಿದ್ದರು.