ಪುತ್ತೂರು: ಈ ವರ್ಷದ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆ ಆಯೋಜಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗ್ರೀನ್ ಸಿಗ್ನಲ್ ನೀಡಿದ್ದು, ಕಂಬಳಕ್ಕೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳು ನಡೆಯುತ್ತಿವೆ ಎಂದು ಪುತ್ತೂರು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ಪುತ್ತೂರಿನಲ್ಲಿ ಮಾತನಾಡಿದ ಅವರು, ಮೈಸೂರು ದಸರಾದಲ್ಲಿ ಕಂಬಳ ಆಯೋಜಿಸುವ ವಿಚಾರದಲ್ಲಿ ಅಲ್ಲಿನವರಿಗೆ ಕೆಲವು ಗೊಂದಲಗಳಿದ್ದವು. ಕಂಬಳಕ್ಕೆ ನೀರು ಪೋಲಾಗುತ್ತದೆ, ಕೆರೆ ನಿರ್ಮಾಣ ಮಾಡಲಾಗುತ್ತದೆ, ಎಮ್ಮೆಗಳನ್ನು ಬಿಟ್ಟು ಹೋಗುತ್ತಾರೆ ಎಂಬಿತ್ಯಾದಿ ಆತಂಕಗಳು ವ್ಯಕ್ತವಾಗಿದ್ದವು. ಇದೀಗ ಈ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯಲಾಗಿದೆ ಎಂದು ಹೇಳಿದರು. ಕಂಬಳವು ಕರಾವಳಿಯ ಸಾಂಸ್ಕೃತಿಕ ಕ್ರೀಡೆಯಾಗಿದ್ದು, ಜನರು ಒಪ್ಪುವಂತಹ ಕ್ರೀಡೆಯಾಗಿದೆ. ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ಆಯೋಜಿಸುವ ಮೂಲಕ ಕರಾವಳಿಯ ಸಂಸ್ಕೃತಿಯನ್ನು ಇನ್ನಷ್ಟು ಜನರಿಗೆ ಪರಿಚಯಿಸುವ ಅವಕಾಶ ದೊರೆಯಲಿದೆ ಎಂದರು. ಪ್ರಸ್ತುತ ಕಂಬಳದ ಕರೆಯ ನಿರ್ಮಾಣ ಸೇರಿದಂತೆ ಅಗತ್ಯ ಕಾಮಗಾರಿಗಳು ನಡೆಯುತ್ತಿವೆ. ಈ ವರ್ಷದ ದಸರಾ ಮಹೋತ್ಸವದಲ್ಲಿ ಕಂಬಳವನ್ನು ಹೆಚ್ಚಿನ ಸಂಖ್ಯೆಯಲ್ಲಿ ಜನರು ವೀಕ್ಷಿಸುವ ನಿರೀಕ್ಷೆಯಿದ್ದು, ಎರಡು ದಿನಗಳಲ್ಲಿ ಸುಮಾರು 25 ಲಕ್ಷ ಮಂದಿ ಕಂಬಳ ವೀಕ್ಷಿಸುವ ನಿರೀಕ್ಷೆ ಇದೆ ಎಂದು ಅಶೋಕ್ ರೈ ತಿಳಿಸಿದರು. ಈಗಾಗಲೇ ಸುಮಾರು 222 ಜೋಡಿ ಕೋಣಗಳ ಯಜಮಾನರು ದಸರಾ ಕಂಬಳದಲ್ಲಿ ಪಾಲ್ಗೊಳ್ಳಲು ಸಂಪರ್ಕಿಸಿದ್ದಾರೆ. ಆದರೆ ವ್ಯವಸ್ಥೆಯ ದೃಷ್ಟಿಯಿಂದ ಗರಿಷ್ಠ 175 ಜೋಡಿ ಕೋಣಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.