ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಂಪ್ರದಾಯಿಕ ದೈವಾರಾಧನೆಯ ಅಂಗವಾಗಿ ನಡೆಯುವ ಕೋಳಿ ಅಂಕವನ್ನು ಈ ಹಿಂದೆ ನಡೆಯುತ್ತಿದ್ದ ರೀತಿಯಲ್ಲೇ ಮುಂದುವರಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಸಾಂಪ್ರದಾಯಿಕ ಆಚರಣೆ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ಬೆಂಗಳೂರಿನ ವಿಧಾನಸೌಧದಲ್ಲಿ ಮನವಿ ಸಲ್ಲಿಸಿದರು ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರನ್ನು ಭೇಟಿಯಾದ ವೇದಿಕೆಯ ಪದಾಧಿಕಾರಿಗಳು, ಕರಾವಳಿಯ ಸಾಂಪ್ರದಾಯಿಕ ಆಚರಣೆಗಳು ಮತ್ತು ದೈವಾರಾಧನೆಯ ಪರಂಪರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಕೋಳಿ ಅಂಕಕ್ಕೆ ಸೂಕ್ತ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಇದೇ ವೇಳೆ ಕರಾವಳಿಯ ಶಾಸಕರಾದ ಸುನಿಲ್ ಕುಮಾರ್, ಹರೀಶ್ ಪೂಂಜ, ಭರತ್ ಶೆಟ್ಟಿ ಸೇರಿದಂತೆ ಹಲವು ಶಾಸಕರಿಗೂ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಸಚಿವ ಯು.ಟಿ.ಖಾದರ್ ಅವರು, ಈ ವಿಚಾರವಾಗಿ ದೇವಸ್ಥಾನಗಳ ಆಡಳಿತ ಮಂಡಳಿ ಮುಖಂಡರು ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಸೂಕ್ತ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು. ಮನವಿ ಸಲ್ಲಿಸುವ ಸಂದರ್ಭದಲ್ಲಿ ಸಾಂಪ್ರದಾಯಿಕ ಆಚರಣೆ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.