ವಿಜಯನಗರ: ಆಟೋದಲ್ಲಿ ಮರೆತು ಹೋಗಿದ್ದ ₹5,00,000 ನಗದು ಹಣವಿದ್ದ ಬ್ಯಾಗ್ ಅನ್ನು ಸುರಕ್ಷಿತವಾಗಿ ಮಾಲೀಕರಿಗೆ ಮರಳಿಸಿದ ಆಟೋ ಚಾಲಕನ ಪ್ರಾಮಾಣಿಕತೆಗೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಸನ್ಮಾನಿಸಲಾಯಿತು. ‘ಝೂಡಿಯೋ’ ಅಂಗಡಿಯ ಮುಂದೆ ದೂರುದಾರರು ಆಟೋದಲ್ಲಿ ಹಣದ ಬ್ಯಾಗ್ ಅನ್ನು ಮರೆತು ತೆರಳಿದ್ದರು. ಬ್ಯಾಗ್ ಗಮನಕ್ಕೆ ಬಂದ ಬಳಿಕ ಆಟೋ ಚಾಲಕನು ಹಣದ ಮಾಲೀಕರನ್ನು ಪತ್ತೆಹಚ್ಚಿ ಬ್ಯಾಗ್ ಹಸ್ತಾಂತರಿಸಲು ಹುಡುಕಾಟ ನಡೆಸುತ್ತಿದ್ದನು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಆಟೋ ಚಾಲಕ ಹಾಗೂ ದೂರುದಾರರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದರು. ಬಳಿಕ ಆಟೋ ಚಾಲಕನಿಂದಲೇ ₹5 ಲಕ್ಷ ನಗದು ಹಣವಿದ್ದ ಬ್ಯಾಗ್ ಅನ್ನು ದೂರುದಾರರಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಯಿತು. ಹಣದ ಬ್ಯಾಗ್ ಅನ್ನು ಪ್ರಾಮಾಣಿಕವಾಗಿ ಮರಳಿಸಿದ ಆಟೋ ಚಾಲಕನ ನಡೆಗೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿ, ಠಾಣೆಯಲ್ಲಿ ಸನ್ಮಾನಿಸಿದರು. ಚಾಲಕನ ಪ್ರಾಮಾಣಿಕತೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.