Connect with us

ಇತರ

ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಸಿದ ತಹಸಿಲ್ದಾರ್ 50 ಲಕ್ಷ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ

Published

on

ಧಾರವಾಡ ಸೆಪ್ಟೆಂಬರ್ 17: ಕೋಟ್ಯಂತರ ರೂಪಾಯಿ ಮೌಲ್ಯದ ಖರಾಬು ಜಮೀನಿನ ಪಹಣಿ ದಾಖಲೆ ತಿದ್ದುಪಡಿ ಮಾಡಿಕೊಡಲು ಬರೋಬ್ಬರಿ 50 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಿ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಧಾರವಾಡ-ಕಲಘಟಗಿ ರಸ್ತೆಯ ಯರಿಕೊಪ್ಪ ಗ್ರಾಮದ ವ್ಯಾಪ್ತಿಯಲ್ಲಿ ಬಾಗಲಕೋಟೆ ಮೂಲದ ಮಂಜುನಾಥ ಅರಳಿಕಟ್ಟಿ ಎಂಬುವವರು ಖರೀದಿಸಿದ್ದ 33 ಎಕರೆ ಜಮೀನಿನ ಪೈಕಿ 13 ಎಕರೆ ಭೂಮಿ ಖರಾಬು ಇತ್ತು. ಈ ಖರಾಬು ಪಹಣಿಯನ್ನು ಸರಿಪಡಿಸಿ ಮಾರ್ಪಾಟು ಮಾಡಿಕೊಡಲು ತಹಶೀಲ್ದಾರ್ ಸಚ್ಚಿದಾನಂದ ಬರೋಬ್ಬರಿ 50 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಅಷ್ಟೇ ಅಲ್ಲದೆ, ಅದೇ ಜಮೀನಿನಲ್ಲಿ 2 ಎಕರೆ ಭೂಮಿಯನ್ನು ತಮ್ಮದಾಗಿಸಿಕೊಳ್ಳಲು ಹೊಂಚು ಹಾಕಿದ್ದರು ಎನ್ನಲಾಗಿದೆ.
 
ವಂಚನೆಗೊಳಗಾದ ಜಮೀನು ಮಾಲೀಕರು ನೀಡಿದ ದೂರಿನ ಆಧಾರದ ಮೇಲೆ ಲೋಕಾಯುಕ್ತ ಎಸ್.ಪಿ. ಸಿದ್ದಲಿಂಗಪ್ಪ ಅವರ ಮಾರ್ಗದರ್ಶನದಲ್ಲಿ ಡಿಎಸ್‌ಪಿ ರವೀಂದ್ರ ಕುರುಬಗಟ್ಟಿ, ಇನ್‌ಸ್ಪೆಕ್ಟರ್‌ಗಳಾದ ಪ್ರಸಾದ್, ಕರುಣೇಶಗೌಡ ಹಾಗೂ ಪ್ರಸಾದ ಪಾನೇಕರ್ ಅವರನ್ನೊಳಗೊಂಡ ತಂಡ ದಾಳಿ ಸಂಘಟಿಸಿತ್ತು. ಬುಧವಾರ ರಾತ್ರಿ ಧಾರವಾಡದ ಪ್ರಸಿದ್ಧ ಕರ್ನಾಟಕ ಕಾಲೇಜು (KCD) ಆವರಣದಲ್ಲಿ ದೂರುದಾರರಿಂದ 50 ಲಕ್ಷ ರೂ. ಲಂಚದ ಹಣವನ್ನು ಪಡೆಯುತ್ತಿದ್ದಂತೆಯೇ ಲೋಕಾಯುಕ್ತ ಪಡೆ ತಹಶೀಲ್ದಾರ್ ಅವರನ್ನು ಸುತ್ತುವರಿದು ವಶಕ್ಕೆ ಪಡೆದುಕೊಂಡಿದೆ.
ವಿಶೇಷವೆಂದರೆ, ಒಂದು ಕಡೆ ಲಕ್ಷಾಂತರ ರೂಪಾಯಿ ಲಂಚ ಪಡೆಯುತ್ತಿದ್ದ ತಹಶೀಲ್ದಾರ್ ಸಚ್ಚಿದಾನಂದ, ಮತ್ತೊಂದೆಡೆ ತಾಲೂಕು ಕಚೇರಿಯಲ್ಲಿ ಸತ್ಯನಾರಾಯಣ ಪೂಜೆ ಹಾಗೂ ಸುಮಾರು 2,000 ಜನರಿಗೆ ಬೃಹತ್ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಿದ್ದರು. ಅಡುಗೆ ಮಾಡಲು ಬಟ್ಟರು ಆಗಮಿಸಿ ಭರದಿಂದ ಅಡುಗೆ ಸಿದ್ಧಪಡಿಸುತ್ತಿದ್ದ ವೇಳೆಯಲ್ಲೇ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಯನ್ನು ಬಂಧಿಸಿ ಶಾಕ್ ನೀಡಿದ್ದಾರೆ. ಪ್ರಸ್ತುತ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಅವರನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು, ವಿಚಾರಣೆ ಹಾಗೂ ಅಕ್ರಮ ಆಸ್ತಿ ಪರಿಶೀಲನೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

 

Continue Reading
Click to comment

Leave a Reply

Your email address will not be published. Required fields are marked *

Advertisement
Exit mobile version