ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಪಾವನ ಸನ್ನಿಧಿ, ಸಮಾನತೆ–ಸಾಮರಸ್ಯ ಹಾಗೂ ಕರಾವಳಿಯ ಶ್ರೀಮಂತ ಸಂಸ್ಕೃತಿಯ ಪ್ರತೀಕವಾಗಿರುವ *ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಐತಿಹಾಸಿಕ ‘ಮಂಗಳೂರು ದಸರಾ ಮಹೋತ್ಸವ’*ಕ್ಕೆ ಸನ್ಮಾನ್ಯ ಉಪಮುಖ್ಯಮಂತ್ರಿ ಶ್ರೀ ಡಿ.ಕೆ. ಶಿವಕುಮಾರ್ ಅವರನ್ನು ಕ್ಷೇತ್ರಾಡಳಿತ ಸಮಿತಿಯ ವತಿಯಿಂದ ಆತ್ಮೀಯವಾಗಿ ಆಹ್ವಾನಿಸಲಾಯಿತು. ಅಕ್ಟೋಬರ್ 11ರಿಂದ 21ರವರೆಗೆ ನಡೆಯಲಿರುವ ಮಂಗಳೂರು ದಸರಾ ಮಹೋತ್ಸವದ ಉದ್ಘಾಟನೆಗೆ ಆಗಮಿಸುವಂತೆ ಆಹ್ವಾನ ನೀಡಲಾಯಿತು.ಈ ಸಂದರ್ಭದಲ್ಲಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷರಾದ ಜೈರಾಜ್ ಹೆಚ್. ಸೋಮಸುಂದರಂ, ಟ್ರಸ್ಟಿಗಳಾದ ಸಂತೋಷ್ ಜೆ. ಪೂಜಾರಿ, ಕಿಶೋರ್ ದಂಡೆಕೇರಿ, ಕ್ಷೇತ್ರದ ಅಭಿವೃದ್ಧಿ ಸಮಿತಿ ಸದಸ್ಯರಾದ ವೇದಕುಮಾರ್, ಲೀಲಾಕ್ಷ ಕರ್ಕೇರ, ಸೂರ್ಯಕಾಂತ್ ಜೆ. ಸುವರ್ಣ, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಪ್ರಭಾಕರ ಬಂಗೇರ, ಕೋಶಾಧಿಕಾರಿ ಯೋಗೀಶ್ ಕುಮಾರ್ ಮೂಲ್ಕಿ ಹಾಗೂ ಕಾರವಾರದ ನ್ಯಾಯವಾದಿ ಜಿ.ಟಿ. ನಾಯ್ಕ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕ್ಷೇತ್ರದ ಅನುಗ್ರಹ ಪ್ರಸಾದ ನೀಡಿ ಶ್ರೀ ಡಿ.ಕೆ. ಶಿವಕುಮಾರ್ ಅವರನ್ನು ಗೌರವಿಸಲಾಯಿತು. ಕರಾವಳಿಯ ಸಾಂಸ್ಕೃತಿಕ ವೈಭವ ಹಾಗೂ ನವದುರ್ಗೆಯರ ಮಹೋತ್ಸವದ ಹಿರಿಮೆಯನ್ನು ಆಲಿಸಿದ ಶ್ರೀ ಡಿ.ಕೆ. ಶಿವಕುಮಾರ್ ಅವರು, “ಕುದ್ರೋಳಿ ಕ್ಷೇತ್ರಕ್ಕೆ ಬರುವುದೇ ಒಂದು ವಿಶೇಷ ಅನುಭವ. ನಾರಾಯಣ ಗುರುಗಳ ಉನ್ನತ ಆಶಯಗಳು ಹಾಗೂ ಕರಾವಳಿಯ ಜನತೆಯ ಸಂಸ್ಕೃತಿಯ ಸಂಕೇತವಾಗಿರುವ ಈ ಮಹೋತ್ಸವದಲ್ಲಿ ಭಾಗಿಯಾಗುವುದು ನನಗೆ ಹೆಮ್ಮೆಯ ವಿಷಯ,” ಎಂದು ಸಂತಸ ವ್ಯಕ್ತಪಡಿಸಿದರು.