Published
23 hours agoon
By
Akkare News
ಧಾರವಾಡ ಸೆಪ್ಟೆಂಬರ್ 17: ಕೋಟ್ಯಂತರ ರೂಪಾಯಿ ಮೌಲ್ಯದ ಖರಾಬು ಜಮೀನಿನ ಪಹಣಿ ದಾಖಲೆ ತಿದ್ದುಪಡಿ ಮಾಡಿಕೊಡಲು ಬರೋಬ್ಬರಿ 50 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಿ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. 

ವಿಶೇಷವೆಂದರೆ, ಒಂದು ಕಡೆ ಲಕ್ಷಾಂತರ ರೂಪಾಯಿ ಲಂಚ ಪಡೆಯುತ್ತಿದ್ದ ತಹಶೀಲ್ದಾರ್ ಸಚ್ಚಿದಾನಂದ, ಮತ್ತೊಂದೆಡೆ ತಾಲೂಕು ಕಚೇರಿಯಲ್ಲಿ ಸತ್ಯನಾರಾಯಣ ಪೂಜೆ ಹಾಗೂ ಸುಮಾರು 2,000 ಜನರಿಗೆ ಬೃಹತ್ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಿದ್ದರು. ಅಡುಗೆ ಮಾಡಲು ಬಟ್ಟರು ಆಗಮಿಸಿ ಭರದಿಂದ ಅಡುಗೆ ಸಿದ್ಧಪಡಿಸುತ್ತಿದ್ದ ವೇಳೆಯಲ್ಲೇ ಲೋಕಾಯುಕ್ತ ಅಧಿಕಾರಿಗಳು ಭ್ರಷ್ಟ ಅಧಿಕಾರಿಯನ್ನು ಬಂಧಿಸಿ ಶಾಕ್ ನೀಡಿದ್ದಾರೆ. ಪ್ರಸ್ತುತ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಅವರನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ ಪೊಲೀಸರು, ವಿಚಾರಣೆ ಹಾಗೂ ಅಕ್ರಮ ಆಸ್ತಿ ಪರಿಶೀಲನೆ ತನಿಖೆಯನ್ನು ತೀವ್ರಗೊಳಿಸಿದ್ದಾರೆ.


