Published
1 hour agoon
By
Akkare News
NRI ಫೋರಂ ಅಧ್ಯಕ್ಷರಾದ ಜನಾಬ್ ಝಕರಿಯಾ ಜೋಕಟ್ಟೆ, ಶೇಖ್ ಕರ್ನಿರೆ ಹಾಗೂ ಕಾರ್ಯಕಾರಿ ಸಮಿತಿಯ ನಿರ್ದೇಶನ ಮತ್ತು ಮಾರ್ಗದರ್ಶನದಡಿ, 06/09/2026ರ ತಡರಾತ್ರಿ ಸುಮಾರು 1 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಹಜ್ಜ್ ಮತ್ತು ಆರೋಗ್ಯ ಸಚಿವರಾದ ಜನಾಬ್ ಯು.ಟಿ. ಖಾದರ್ ಸಾಹೇಬರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ತಡರಾತ್ರಿಯಲ್ಲಿಯೂ ನಮ್ಮ ಮನವಿಯನ್ನು ಸ್ವೀಕರಿಸಿ, ವಿಷಯದ ಗಂಭೀರತೆಯನ್ನು ಅರಿತು ತಕ್ಷಣ ಸ್ಪಂದಿಸಿದ ಸಚಿವರು, ಈ ಕುರಿತು ಕರ್ನಾಟಕ ಚುನಾವಣಾ ಆಯೋಗದೊಂದಿಗೆ ಮಾತನಾಡುವುದಾಗಿ ಭರವಸೆ ನೀಡಿದರು. ವಿದೇಶದಲ್ಲಿರುವ ಕನ್ನಡಿಗರು ಭಾರತಕ್ಕೆ ಆಗಮಿಸಿ ಭೌತಿಕವಾಗಿ ಹಾಜರಾಗಬೇಕಾದ ಅನಿವಾರ್ಯತೆ ಉಂಟಾಗದಂತೆ, ಪಾಸ್‌ಪೋರ್ಟ್ ಪ್ರತಿಯನ್ನು ಸಲ್ಲಿಸುವುದು ಅಥವಾ ಅಗತ್ಯವಿದ್ದಲ್ಲಿ ವರ್ಚುವಲ್ ಮೂಲಕ ಹಾಜರಾಗುವ ವ್ಯವಸ್ಥೆ ಕಲ್ಪಿಸುವ ಕುರಿತು ಚುನಾವಣಾ ಆಯೋಗದೊಂದಿಗೆ ಶೀಘ್ರದಲ್ಲೇ ಚರ್ಚಿಸಿ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ.
ಆದ್ದರಿಂದ SIR ನೋಟೀಸ್ ಪಡೆದಿರುವ NRI ಕನ್ನಡಿಗರು ಯಾರೂ ಆತಂಕಪಡುವ ಅಗತ್ಯವಿಲ್ಲ. ನಿಮ್ಮ ಸಮಸ್ಯೆಗೆ ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಇದು ವಿದೇಶಗಳಲ್ಲಿ ನೆಲೆಸಿರುವ ನಮ್ಮ ಎಲ್ಲಾ NRI ಕನ್ನಡಿಗರಿಗೆ ಸಂತಸದ ಹಾಗೂ ಆಶಾದಾಯಕ ಸುದ್ದಿ.
ಈ ಸಂದರ್ಭದಲ್ಲಿ ನಮ್ಮೊಂದಿಗೆ NRI ಫೋರಂ ಸೌದಿ ಅರೇಬಿಯಾದ ಸಲಹೆಗಾರರಾದ ಫಾರೂಕ್ ಮೂಲ್ಕಿ, ಖಜಾಂಚಿ ಆಯಾಜ್ ಕೈಕಂಬ, ಮುಖ್ಯ ಸಂಯೋಜಕರಾದ ರಫೀಕ್ ಕೆ.ಎಚ್, ಅಬ್ದುಲ್ ಹಮೀದ್ ಆರಮ್ಯಾಕ್ಸ್ ಹಾಗೂ ಮುಸ್ತಾಕ್ ಎಂ.ಎಚ್ ಉಪಸ್ಥಿತರಿದ್ದರು.


