Published
10 hours agoon
By
Akkare News
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಿಡ್ಲೆ ಗ್ರಾಮದ ಮೂಲದ ಶ್ರೀಮತಿ ಶ್ರೀಕಲಾ ಬೊಳ್ಳಾಜೆ ಅವರು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದು, 2011ರಿಂದ ಜಪಾನ್‌ನ ಟೋಕಿಯೊದಲ್ಲಿ ನೆಲೆಸಿದ್ದಾರೆ. ಭಾರತ ಮತ್ತು ಜಪಾನ್ ನಡುವಿನ ಸಾಂಸ್ಕೃತಿಕ ಬಾಂಧವ್ಯವನ್ನು ಬಲಪಡಿಸುವ ನಿಟ್ಟಿನಲ್ಲಿ ಭಾರತೀಯ ಪರಂಪರೆ, ಸಾಂಪ್ರದಾಯಿಕ ಕಲೆಗಳು, ಭಾಷೆ ಹಾಗೂ ಆಧ್ಯಾತ್ಮಿಕ ಮೌಲ್ಯಗಳ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಯಕ್ಷಗಾನ ಕಲಾವಿದೆಯಾಗಿ ಶ್ರೀಮತಿ ಶ್ರೀಕಲಾ ಬೊಳ್ಳಾಜೆ ಅವರು ತಮ್ಮ ಹತ್ತನೇ ವಯಸ್ಸಿನಿಂದಲೇ ಯಕ್ಷಗಾನ ತರಬೇತಿ ಪಡೆದಿದ್ದಾರೆ. ಜಪಾನ್‌ಗೆ ತೆರಳಿದ ಬಳಿಕ ಅಲ್ಲಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ನೀಡುತ್ತಾ, ಕರಾವಳಿ ಕರ್ನಾಟಕದ ಈ ವಿಶಿಷ್ಟ ಕಲಾಪರಂಪರೆಯನ್ನು ಜಪಾನ್‌ನಲ್ಲಿ ಪರಿಚಯಿಸುತ್ತಿದ್ದಾರೆ. ಯಕ್ಷಗಾನವನ್ನು ಜಪಾನ್‌ನ ಸಾಂಪ್ರದಾಯಿಕ ಕಲಾ ಪ್ರಕಾರಗಳೊಂದಿಗೆ ಪರಿಚಯಿಸುವ ಮೂಲಕ ಭಾರತ–ಜಪಾನ್ ಸಾಂಸ್ಕೃತಿಕ ಸಂಬಂಧವನ್ನು ಬಲಪಡಿಸುವಲ್ಲಿ ಅವರು ಕೊಡುಗೆ ನೀಡಿದ್ದಾರೆ. ಮಕ್ಕಳಿಗೆ ತರಬೇತಿ ನೀಡುವ ಮೂಲಕ ಮುಂದಿನ ಪೀಳಿಗೆಗೂ ಈ ಕಲೆಯನ್ನು ಪರಿಚಯಿಸುವ ಕಾರ್ಯ ಮಾಡುತ್ತಿದ್ದಾರೆ.
ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಅಂಕಣಕಾರರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಜಪಾನ್‌ನ ಸಂಸ್ಕೃತಿ, ಶಿಕ್ಷಣ, ಸಾಮಾಜಿಕ ಪದ್ಧತಿಗಳು ಹಾಗೂ ಅಲ್ಲಿನ ಬೆಳವಣಿಗೆಗಳ ಕುರಿತು ಬರಹಗಳ ಮೂಲಕ ಕನ್ನಡ ಓದುಗರಿಗೆ ಪರಿಚಯಿಸುತ್ತಿದ್ದಾರೆ. ಇದರಿಂದ ಜಪಾನ್ ಮತ್ತು ಭಾರತದ ನಡುವಿನ ಸಾಂಸ್ಕೃತಿಕ ತಿಳುವಳಿಕೆಯನ್ನು ವೃದ್ಧಿಸುವ ಕಾರ್ಯವೂ ನಡೆಯುತ್ತಿದೆ.
ಶಾಸ್ತ್ರೀಯ ನೃತ್ಯ ಕ್ಷೇತ್ರದಲ್ಲಿಯೂ ಆಸಕ್ತಿ ಹೊಂದಿರುವ ಅವರು ಜಪಾನಿನ ಶಿಕ್ಷಕರಿಂದ ಮೋಹಿನಿಯಾಟ್ಟಂ ತರಬೇತಿ ಪಡೆದಿದ್ದು, ಪ್ರಸಿದ್ಧ ನಮಸ್ತೆ ಇಂಡಿಯಾ ಉತ್ಸವದಲ್ಲಿ ಪ್ರದರ್ಶನ ನೀಡಿದ್ದಾರೆ. ಕಥಕ್ ನೃತ್ಯದಲ್ಲಿಯೂ ತರಬೇತಿ ಪಡೆದು ವಿವಿಧ ಸಂದರ್ಭಗಳಲ್ಲಿ ಪ್ರದರ್ಶನ ನೀಡಿದ್ದಾರೆ.
ಮಕ್ಕಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹಲವು ನಾಟಕಗಳನ್ನು ನಿರ್ದೇಶಿಸಿರುವ ಅವರು, ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಹೆಮ್ಮೆಯನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜಪಾನ್‌ನಲ್ಲಿರುವ ಕರ್ನಾಟಕದ ಮಕ್ಕಳಿಗೆ ಸವಿ ಕನ್ನಡ – ಕನ್ನಡ ಕಲಿ ನಲಿ ಸಮೂಹದ ಮೂಲಕ ಸ್ವಯಂಸೇವಕಿಯಾಗಿ ಕನ್ನಡ ಭಾಷೆಯನ್ನು ಬೋಧಿಸುತ್ತಿದ್ದು, ಯುವ ಪೀಳಿಗೆಯಲ್ಲಿ ಕನ್ನಡ ಭಾಷೆ ಮತ್ತು ಸಾಂಸ್ಕೃತಿಕ ಗುರುತನ್ನು ಉಳಿಸುವ ಕಾರ್ಯ ಮಾಡುತ್ತಿದ್ದಾರೆ.
ಇದಲ್ಲದೆ ಗೀತಾ ಪರಿವಾರ ಜಪಾನ್ ಸಮೂಹದ ಸಕ್ರಿಯ ಸದಸ್ಯೆಯಾಗಿ ಭಗವದ್ಗೀತೆಯ ಸಂದೇಶ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಜಪಾನ್‌ನಲ್ಲಿ ಪರಿಚಯಿಸುವ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಜಪಾನ್‌ನಲ್ಲಿ ನೆಲೆಸಿರುವ ತುಳುವರನ್ನು ಸಂಘಟಿಸಿ, ತುಳು ಭಾಷೆ, ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪರಂಪರೆಯ ಸಂರಕ್ಷಣೆ ಮತ್ತು ಬೆಳವಣಿಗೆಗೆ ಶ್ರಮಿಸುವ ಉದ್ದೇಶದಿಂದ ತುಳುವ ಮಹಾಸಭೆ ಇಂಟರ್‌ನ್ಯಾಷನಲ್‌ನ ಅಂತರರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿ ಅವರು ಶ್ರೀಮತಿ ಶ್ರೀಕಲಾ ಬೊಳ್ಳಾಜೆ ಅವರನ್ನು ಜಪಾನ್ ಘಟಕದ ಅಧ್ಯಕ್ಷರಾಗಿ ನೇಮಕಗೊಳಿಸಿದ್ದಾರೆ.



