Connect with us

ಇತರ

KPSC ನೇಮಕಾತಿ ಹಗರಣಕ್ಕೆ ಬಿಗ್‌ ಟ್ವಿಸ್ಟ್‌: ₹40 ಲಕ್ಷಕ್ಕೆ ಪ್ರಶ್ನೆಪತ್ರಿಕೆ ಮಾರಾಟ, ಬಿಜೆಪಿ ಮುಖಂಡ ಅರೆಸ್ಟ್!

Published

on

ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ್ದ ಪಶುವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಪರೀಕ್ಷೆಯ ಹಗರಣ ಇದೀಗ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ರಾಜ್ಯಾದ್ಯಂತ ಸಂಚಲನ ಮೂಡಿಸಿರುವ ಈ ಪ್ರಕರಣದಲ್ಲಿ ದಿನಕ್ಕೊಂದು ಸ್ಫೋಟಕ ಮಾಹಿತಿಗಳು ಹೊರಬೀಳುತ್ತಿವೆ. ಹಗರಣದ ಬೆನ್ನುಬಿದ್ದಿರುವ ಅಪರಾಧ ತನಿಖಾ ದಳ ಅಧಿಕಾರಿಗಳು, ಪ್ರಕರಣದ ಪ್ರಮುಖ ರೂವಾರಿ ಎನ್ನಲಾದ ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಹಾಗೂ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ಬಿಜೆಪಿ ಮುಖಂಡ ಬಸವರಾಜ್ ಕನ್ನಾಳೆ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಐಡಿ ತನಿಖೆಯ ವೇಳೆ ಪ್ರಶ್ನೆಪತ್ರಿಕೆ ಸೋರಿಕೆಯ ಅಸಲಿ ಬಣ್ಣ ಬಯಲಾಗಿದ್ದು, ಕೆಪಿಎಸ್‌ಸಿ ಪರೀಕ್ಷೆಗಳ ಉಸ್ತುವಾರಿ ಹಾಗೂ ಪರೀಕ್ಷಾ ನಿಯಂತ್ರಕರಾಗಿ ಕಾರ್ಯನಿರ್ವಹಿಸುತ್ತಿದ್ದ ಐಎಎಸ್‌ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅವರೇ ಈ ಇಡೀ ಹಗರಣದ ಪ್ರಮುಖ ಸೂತ್ರಧಾರ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಹೌದು, ಉನ್ನತ ಹುದ್ದೆಯಲ್ಲಿದ್ದುಕೊಂಡು, ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಪಾಡಬೇಕಿದ್ದ ಅಧಿಕಾರಿಯೇ ಹಣದ ಆಸೆಗೆ ಬಿದ್ದು ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿದ್ದಾರೆ ಎಂಬುದು ತನಿಖೆಯಲ್ಲಿ ದೃಢಪಟ್ಟಿದೆ. ದೆಹಲಿಯಲ್ಲಿ ಸಿಕ್ಕಿಬಿದ್ದ ಮಧ್ಯವರ್ತಿ ಬಸವರಾಜ್ ಕನ್ನಾಳೆ ಗ್ಯಾನೇಂದ್ರ ಕುಮಾರ್ ಬಂಧನದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸಿಐಡಿ ತಂಡ, ಪ್ರಕರಣದ ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆಗಾಗಿ ಬಲೆ ಬೀಸಿತ್ತು. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಡೋಣಗಾಪುರ ಗ್ರಾಮದ ನಿವಾಸಿಯಾಗಿರುವ ಬಸವರಾಜ್, ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯನಾಗಿದ್ದಲ್ಲದೆ, ಸ್ಥಳೀಯ ಮುಖಂಡನಾಗಿದ್ದ. ಭಾನುವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಈತನನ್ನು ವಶಕ್ಕೆ ಪಡೆಯುವಲ್ಲಿ ತನಿಖಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಇದಲ್ಲದೆ, ಭಾಲ್ಕಿ ನಗರದ ಲೆಕ್ಚರರ್ ಕಾಲನಿಯಲ್ಲಿರುವ ಹಾಗೂ ಡೋಣಗಾಪುರ್ ಗ್ರಾಮದಲ್ಲಿರುವ ಈತನ ಮನೆಗಳ ಮೇಲೂ ಸಿಐಡಿ ಅಧಿಕಾರಿಗಳು ದಾಳಿ ನಡೆಸಿ, ಮಹತ್ವದ ದಾಖಲೆಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.

₹40 ಲಕ್ಷಕ್ಕೆ ಸೇಲ್ ಆಯ್ತು ಪರೀಕ್ಷಾ ಪ್ರಶ್ನೆಪತ್ರಿಕೆ!

ಅರ್ಹ ಅಭ್ಯರ್ಥಿಗಳಿಗೆ ದ್ರೋಹ ಬಗೆದು ಕೋಟ್ಯಂತರ ರೂಪಾಯಿ ಲೂಟಿ ಮಾಡಲು ಆರೋಪಿಗಳು ಭಾರಿ ಸಂಚು ರೂಪಿಸಿದ್ದರು. ಐಎಎಸ್ ಅಧಿಕಾರಿ ಗ್ಯಾನೇಂದ್ರ ಕುಮಾರ್ ಅವರಿಂದ ರಹಸ್ಯವಾಗಿ ಪ್ರಶ್ನೆಪತ್ರಿಕೆಯನ್ನ ಪಡೆದುಕೊಂಡಿದ್ದ ಬಸವರಾಜ್ ಕನ್ನಾಳೆ, ಅದನ್ನು ಅಭ್ಯರ್ಥಿಗಳಿಗೆ ತಲಾ 40 ಲಕ್ಷ ರೂಪಾಯಿಗಳಂತೆ ಮಾರಾಟ ಮಾಡಿದ್ದ. ಹುದ್ದೆಯ ಆಸೆಗೆ ಬಿದ್ದ ಹಲವು ಅಭ್ಯರ್ಥಿಗಳು ಈತನಿಗೆ ಹಣ ನೀಡಿ ಪ್ರಶ್ನೆಪತ್ರಿಕೆ ಖರೀದಿಸಿದ್ದರು ಎನ್ನುವ ವಿಚಾರ ಸಿಐಡಿ ವಿಚಾರಣೆ ವೇಳೆ ಬಯಲಾಗಿದ

 
 
ಸಾಕ್ಷ್ಯ ನಾಶಕ್ಕೆ ಸಿಸಿಟಿವಿ ದೃಶ್ಯಗಳ ಡಿಲೀಟ್ ಕೇವಲ ಪ್ರಶ್ನೆಪತ್ರಿಕೆ ಸೋರಿಕೆ ಮಾತ್ರವಲ್ಲದೆ, ತಮ್ಮ ಕೃತ್ಯ ಯಾರಿಗೂ ತಿಳಿಯಬಾರದು ಎಂಬ ಕಾರಣಕ್ಕೆ ಆರೋಪಿಗಳು ಸಾಕ್ಷ್ಯ ನಾಶಕ್ಕೂ ವ್ಯವಸ್ಥಿತವಾಗಿ ಯತ್ನಿಸಿದ್ದಾರೆ. ಪರೀಕ್ಷೆಯ ನಂತರ ಒಎಂಆರ್ ಶೀಟ್‌ಗಳಲ್ಲಿ ತಿದ್ದುಪಡಿ ಮಾಡುವುದು ಹಾಗೂ ಅಕ್ರಮದ ಸುಳಿವು ಸಿಗದಿರಲು ಸ್ಟ್ರಾಂಗ್ ರೂಮ್‌ನಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನ ಡಿಲೀಟ್‌ ಮಾಡುವ ದುಸ್ಸಾಹಸಕ್ಕೂ ಕೈಹಾಕಲಾಗಿತ್ತು. ತನಿಖೆ ವೇಳೆ ಈ ಎಲ್ಲ ಡಿಜಿಟಲ್ ಹಾಗೂ ಭೌತಿಕ ಸಾಕ್ಷ್ಯಗಳನ್ನು ಸಿಐಡಿ ಅಧಿಕಾರಿಗಳು ಕಲೆಹಾಕಿದ್ದಾರೆ. ಸೋಮವಾರವಷ್ಟೇ ಬಂಧಿತ ಇಬ್ಬರು ಆರೋಪಿಗಳನ್ನ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಕೋರ್ಟ್ ಸೆಪ್ಟೆಂಬರ್ 9ರವರೆಗೆ ಇಬ್ಬರನ್ನೂ ಸಿಐಡಿ ಕಸ್ಟಡಿಗೆ ಒಪ್ಪಿಸಿದೆ. ಈ ಭಾರಿ ಹಗರಣದಲ್ಲಿ ಇನ್ನೂ ಯಾರ್ಯಾರು ಶಾಮೀಲಾಗಿದ್ದಾರೆ, ಎಷ್ಟು ಅಭ್ಯರ್ಥಿಗಳು ಹಣ ನೀಡಿ ಪರೀಕ್ಷೆ ಬರೆದಿದ್ದಾರೆ ಎಂಬಿತ್ಯಾದಿ ಸತ್ಯಾಸತ್ಯತೆಗಳು ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಹೊರಬರಬೇಕಿದೆ.

Continue Reading
Click to comment

Leave a Reply

Your email address will not be published. Required fields are marked *

Advertisement