Published
53 minutes agoon
By
Akkare News
ರಾಜ್ಯದ ಎಲ್ಲಾ ಧಾರ್ಮಿಕ ದತ್ತಿ (ಮುಜರಾಯಿ) ದೇವಾಲಯಗಳ ಹಣ, ಭಕ್ತರ ಕಾಣಿಕೆ ಮತ್ತು ಆಸ್ತಿ-ಪಾಸ್ತಿಗಳಿಗೆ ಸೂಕ್ತ ಲೆಕ್ಕಪತ್ರ ನಿರ್ವಹಣೆ ಹಾಗೂ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ದೇಶನಗಳನ್ನು ನೀಡಿದೆ. ದೇವಾಲಯಗಳಲ್ಲಿ ನಡೆಯುವ ಕಳ್ಳತನ, ದುರುಪಯೋಗ ಮತ್ತು ನಕಲಿ ರಶೀದಿ ದಂಧೆಯನ್ನು ತಡೆಯಲು ಇ-ಆಡಳಿತ ಇಲಾಖೆಯ ಸಹಯೋಗದೊಂದಿಗೆ ಡಿಜಿಟಲ್ ವ್ಯವಸ್ಥೆ ಅಳವಡಿಸುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಹೈಕೋರ್ಟ್ ಆದೇಶಿಸಿದೆ.
ಹುಂಡಿ ಕಾಣಿಕೆ, ಅರ್ಚನೆ, ಸೇವಾ ಟಿಕೆಟ್ಗಳು, ವಸತಿ ಮತ್ತು ವಾಹನ ಪಾರ್ಕಿಂಗ್ ಶುಲ್ಕ, ದೇಣಿಗೆ, ಪ್ರಸಾದ ಮಾರಾಟ ಹಾಗೂ ಪ್ರಕಟಣೆಗಳ ಮಾರಾಟ ಸೇರಿದಂತೆ ಪ್ರತಿಯೊಂದು ಆದಾಯಕ್ಕೂ ಇ-ಪಾವತಿ ಸೌಲಭ್ಯ ಕಲ್ಪಿಸಬೇಕು. ದೇವಾಲಯದ ಕೌಂಟರ್ಗಳಲ್ಲಿ ನೀಡಲಾಗುವ ಪ್ರತಿಯೊಂದು ರಶೀದಿಯ ಮೇಲೆಯೂ ಮುದ್ರಿತ QR ಕೋಡ್ ಇರಬೇಕು. ಭಕ್ತರು ಈ QR ಕೋಡ್ ಸ್ಕ್ಯಾನ್ ಮಾಡುವ ಮೂಲಕ ತಮಗಿತ್ತ ರಶೀದಿಯು ನೈಜವಾಗಿದೆಯೇ ಅಥವಾ ನಕಲಿಯಾಗಿದೆಯೇ ಎಂಬುದನ್ನು ಸ್ಥಳದಲ್ಲೇ ಕೇಂದ್ರೀಯ ಸರ್ವರ್ ಮೂಲಕ ಪರಿಶೀಲಿಸಬಹುದು.
ಭಕ್ತರ ಅನುಕೂಲಕ್ಕಾಗಿ ದೇವಾಲಯಗಳ ಆವರಣದಲ್ಲಿ ಸ್ವಯಂ ಸೇವಾ ಡಿಜಿಟಲ್ ಪಾವತಿ ಯಂತ್ರಗಳನ್ನು ಅಳವಡಿಸಲು ಸೂಚಿಸಲಾಗಿದೆ. ಉಡುಪಿ ಜಿಲ್ಲೆಯ ಮಂದಾರ್ತಿಯ ಶ್ರೀ ದುರ್ಗಾಪರಮೇಶ್ವರಿ ದೇವಾಲಯದಲ್ಲಿ ದ್ವಿತೀಯ ದರ್ಜೆ ಸಹಾಯಕನಾಗಿದ್ದ ರಾಜೇಶ್ ನಾಯಕ್ ಎಂಬಾತ, ಐಟಿ ಅಡ್ಮಿನ್ ಅವರ ಐಡಿ ಮತ್ತು ಪಾಸ್ವರ್ಡ್ ದುರುಪಯೋಗಪಡಿಸಿಕೊಂಡು ಭಕ್ತರಿಗೆ ನಕಲಿ ರಶೀದಿ ನೀಡಿ ಹಣ ದುರುಪಯೋಗಪಡಿಸಿಕೊಂಡಿದ್ದನು. ಈತನನ್ನು 2020ರಲ್ಲಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಈ ವಜಾ ಆದೇಶವನ್ನು ಎತ್ತಿಹಿಡಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠವು ಈ ನಿರ್ದೇಶನಗಳನ್ನು ನೀಡಿದೆ.


