Published
1 hour agoon
By
Akkare News
ಪುತ್ತೂರು: ಶಿವಳ್ಳಿ ಸಂಪದ ಬೋಳುವಾರು ವಲಯದ ಆಶ್ರಯದಲ್ಲಿ, ಕೆಮ್ಮಾಯಿಯ ಶ್ರೀವಿಷ್ಣು ಮಂಟಪದಲ್ಲಿ ಏರ್ಪಡಿಸಿದ್ದ 7 ದಿನಗಳ ‘ಹರಿವಂಶ ಪುರಾಣ ಪ್ರವಚನ’ ಸಪ್ತಾಹಕ್ಕೆ ಮಂಗಳವಾರ (ಸೆ.15) ಸಂಜೆ ಚಾಲನೆ ದೊರೆಯಿತು. ಪ್ರವಚನ ಕಾರ್ಯಕ್ರಮವು ಸೆ.21 ರವರೆಗೆ ನಡೆಯಲಿದೆ.

ಉದ್ಘಾಟನಾ ಸಮಾರಂಭದಲ್ಲಿ ಆಶಿತ್ ಕೃಷ್ಣ ರಾವ್ ಪ್ರಾರ್ಥನೆ ನೆರವೇರಿಸಿದರು. ಬೋಳುವಾರು ವಲಯದ ಕಾರ್ಯದರ್ಶಿ ಹರಿಪ್ರಸಾದ್ ದಾಳಿಂಬ ಅತಿಥಿಗಳನ್ನು ಸ್ವಾಗತಿಸಿದರು. ಮೈಸೂರಿನ ಖ್ಯಾತ ಪ್ರವಚನಕಾರ ಡಾ.ಬಿ.ನಾ.ವಿಜಯೇಂದ್ರ ಆಚಾರ್ಯ ‘ಹರಿವಂಶ ಪುರಾಣ’ ಕುರಿತು ಮುಖ್ಯ ಪ್ರವಚನ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರಿನ ಶಾರದಾ ಮಹಾವಿದ್ಯಾಲಯದ ಸಂಸ್ಥಾಪಕ ಎಂ.ಬಿ.ಪುರಾಣಿಕ್ ಮಾತನಾಡಿ, ಮಕ್ಕಳಿಗೆ ಬಾಲ್ಯದಿಂದಲೇ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಂಸ್ಕಾರ ಮೌಲ್ಯಗಳನ್ನು ಕಲಿಸುವ ಅಗತ್ಯವಿದೆ. ಹೆತ್ತವರು ತಮ್ಮ ಮಕ್ಕಳಲ್ಲಿ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಬೆಳೆಸಬೇಕು. ಇಂತಹ ಧಾರ್ಮಿಕ – ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು ಎಂದರು. ಅವರ ಪರಿಚಯವನ್ನು ಡಾ.ಮಾಧವ ಭಟ್ ನೆರವೇರಿಸಿದರು. ಶಿವಳ್ಳಿ ಸಂಪದ ಬೋಳುವಾರು ವಲಯದ ಅಧ್ಯಕ್ಷ ಅನಂತಕೃಷ್ಣ ಪಡ್ಡಿಲ್ಲಾಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


