Published
11 hours agoon
By
Akkare News
ಮಂಗಳೂರು: ಕಾಂತಾರ ಚಿತ್ರದ ‘ಗುರುವ’ ಪಾತ್ರದ ಮೂಲಕ ರಾಜ್ಯದಾದ್ಯಂತ ಗಮನ ಸೆಳೆದ ತುಳುನಾಡಿನ ಪ್ರತಿಭೆ, ರಂಗ ಕಲಾವಿದ ಹಾಗೂ ನಟ ಸ್ವರಾಜ್ ಶೆಟ್ಟಿ ಇದೀಗ ಮತ್ತೊಂದು ವಿಶಿಷ್ಟ ಪ್ರಯತ್ನದೊಂದಿಗೆ ರಂಗ ವೇದಿಕೆಗೆ ಮರಳಿದ್ದಾರೆ. ‘ಶಿವದೂತೆ ಗುಳಿಗೆ’ ನಾಟಕದ ಮೂಲಕ ಮನೆಮಾತಾಗಿದ್ದ ಅವರು, ಇದೀಗ ‘ಕಾಡ ಗಗ್ಗರ’ ಎಂಬ ಕಾಲ್ಪನಿಕ ತುಳು ನಾಟಕದ ಮೂಲಕ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.
ಧರ್ಮ–ಅಧರ್ಮ ಹಾಗೂ ಸಜ್ಜನ–ದುರ್ಜನರ ನಡುವಿನ ಸಂಘರ್ಷವನ್ನು ಕೇಂದ್ರವಾಗಿಸಿಕೊಂಡಿರುವ ‘ಕಾಡ ಗಗ್ಗರ’ ಕಾಲ್ಪನಿಕ ಕಥಾಹಂದರ ಹೊಂದಿದೆ. ಹಾಡುಗಳು, ಸಂಭಾಷಣೆ, ಪಾತ್ರಗಳ ವೇಷಭೂಷಣ, ಕಾಡುಜನರ ಭಾಷೆ ಹಾಗೂ ಕಲಾವಿದರ ಅಭಿನಯ ನಾಟಕಕ್ಕೆ ಮತ್ತಷ್ಟು ಮೆರುಗು ನೀಡಿವೆ. ಸುಮಾರು ಎರಡು ಗಂಟೆಗಳ ಕಾಲ ಸಾಗುವ ನಾಟಕ ಪ್ರೇಕ್ಷಕರನ್ನು ಆರಂಭದಿಂದ ಕೊನೆಯವರೆಗೂ ಹಿಡಿದಿಟ್ಟುಕೊಳ್ಳುವಂತೆ ರೂಪಿಸಲಾಗಿದೆ.
ನಾಟಕದಲ್ಲಿ ಒಟ್ಟು 14 ಮಂದಿ ಕಲಾವಿದರು ವಿವಿಧ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸ್ವರಾಜ್ ಶೆಟ್ಟಿ ಮದರ ಹಾಗೂ ರತ್ನಕೇತು ಪಾತ್ರಗಳಲ್ಲಿ, ರವಿ ವರ್ಕಾಡಿ ಭೈರಜ್ಜನಾಗಿ, ಜಗದೀಶ್ ಅಡ್ಯಾರ್ ಗುರ್ಕಾರನಾಗಿ, ಅನಿರುದ್ಧ್ ಉಳ್ಳಾಲ್ ಭದ್ರನಾಗಿ, ನಿಶ್ಚಿತಾ ಪೆರುವಾಯಿ ಮಂದಾರಳಾಗಿ, ಧ್ರುವೀಶ್ ಪುತ್ತೂರು ಕುಮಾರನಾಗಿ ಹಾಗೂ ದೀಕ್ಷಿತ್ ಅಳಕೆಮಜಲ್ ಬೂದಾ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಇವರೊಂದಿಗೆ ಗಣಮಾಣಿ, ರಂಗು, ಮಲ್ಲಿಕಾ ದೇವಾಡಿಗ, ಜಗದೀಶ್ ಸುಳ್ಯ, ಪೃಥ್ವಿರಾಜ್ ಬೋಳಂತೂರು, ಅಭಿಷೇಕ್ ಶೆಟ್ಟಿ, ಶ್ವೇತಾ ಅರೆಹೊಳೆ, ಕಾರ್ತಿಕ್ ಕೃಷ್ಣಾಪುರ, ನಯನ ಉಡುಪಿ ಹಾಗೂ ದೇವಿಕಾ ಪಡೀಲ್ ಸೇರಿದಂತೆ ಹಲವು ಕಲಾವಿದರು ವಿವಿಧ ಪಾತ್ರಗಳಿಗೆ ಜೀವ ತುಂಬಿದ್ದಾರೆ.
‘ಕಾಡ ಗಗ್ಗರ’ದ ಮೂಲಕ ಸ್ವರಾಜ್ ಶೆಟ್ಟಿ ನಟನೆ ಜತೆಗೆ ನಿರ್ದೇಶನದಲ್ಲೂ ಹೊಸ ಹೆಜ್ಜೆ ಇಟ್ಟಿದ್ದು, ತುಳು ರಂಗಭೂಮಿಯಲ್ಲಿ ವಿಭಿನ್ನ ಪ್ರಯೋಗವೊಂದನ್ನು ಪರಿಚಯಿಸುವ ಪ್ರಯತ್ನ ಮಾಡಿದ್ದಾರೆ.