ಪುತ್ತೂರು, ಜು.25: ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ಖಂಡಿಸಿ ವಿದ್ಯಾರ್ಥಿ ಹಿತರಕ್ಷಣಾ ವೇದಿಕೆ ವತಿಯಿಂದ ಜುಲೈ 25ರಂದು ಬೆಳಿಗ್ಗೆ 11.30ಕ್ಕೆ ಪುತ್ತೂರಿನ ಬಸ್ ನಿಲ್ದಾಣದ ಬಳಿಯ ಗಾಂಧೀಕಟ್ಟೆಯಿಂದ ಅಮರ್ ಜವಾನ್ ಜ್ಯೋತಿವರೆಗೆ ಶಾಂತಿಯುತ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ಸಂಚಾಲಕ ಬಾತೀಷ ಅಳಕೆಮಜಲು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ 20 ದಿನಗಳಿಂದ ವಿದ್ಯಾರ್ಥಿಗಳು ತಮ್ಮ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸುತ್ತಿದ್ದರೂ, ಇದುವರೆಗೆ ಯಾವುದೇ ಸಚಿವರು ಅಥವಾ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ಆರೋಪಿಸಿದರು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಇದೇ ಮೊದಲಲ್ಲ. ಹಲವು ಬಾರಿ ಇಂತಹ ಘಟನೆಗಳು ನಡೆದಿದ್ದು, ಇದರ ಪರಿಣಾಮವಾಗಿ ಅನೇಕ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀಟ್ ಕೇವಲ ಒಂದು ಪರೀಕ್ಷೆಯಲ್ಲ; ಅದರ ಹಿಂದೆ ವಿದ್ಯಾರ್ಥಿಗಳ ಹಲವು ವರ್ಷಗಳ ಪರಿಶ್ರಮ ಅಡಗಿದೆ. ಈ ಅಕ್ರಮದಿಂದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಹೆಚ್ಚಿನ ನಷ್ಟ ಅನುಭವಿಸುತ್ತಿದ್ದಾರೆ” ಎಂದು ಅವರು ಹೇಳಿದರು. ಹಿಂದಿನ ಸರ್ಕಾರವು ಎಲ್ಲ ವರ್ಗದ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದ ಅವಕಾಶ ಕಲ್ಪಿಸುವ ಉದ್ದೇಶದಿಂದ ನೀಟ್ ಪರೀಕ್ಷೆಯನ್ನು ಜಾರಿಗೆ ತಂದಿತ್ತು. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳು ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ತರುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು. “ನೀಟ್ ಪರೀಕ್ಷೆಗೆ ವಿದ್ಯಾರ್ಥಿಗಳು ಪಿಯುಸಿ ನಂತರ ಒಂದು ಅಥವಾ ಎರಡು ವರ್ಷಗಳ ಕಾಲ ಕಠಿಣ ಪರಿಶ್ರಮ ಪಡುತ್ತಾರೆ. ಇಂತಹ ಮಹತ್ವದ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಸಣ್ಣ ತಪ್ಪಲ್ಲ. ಕಳೆದ 20 ದಿನಗಳಿಂದ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವುದನ್ನು ದೇಶದ ಪ್ರತಿಯೊಬ್ಬರೂ ಖಂಡಿಸಬೇಕು” ಎಂದು ಅವರು ಹೇಳಿದರು. ಜಾಥಾ ಕುರಿತು ಜಿಲ್ಲೆಯ ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗಿದ್ದು, ಜಿಲ್ಲೆ ವಿವಿಧ ತಾಲೂಕುಗಳಿಂದ ಸುಮಾರು 500 ರಿಂದ 600 ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಬಾತೀಷ ಅಳಕೆಮಜಲು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ವಿದ್ಯಾರ್ಥಿ ಹಿತರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ಯಾಸ್ಟರ್ನ್ ಫೆರ್ನಾಂಡೀಸ್, ಶಮೀನ್ ಮುಕ್ವೆ, ಹ್ಯಾರೀಸ್ ದರ್ಬೆ ಹಾಗೂ ಮುನೀಫ್ ನೆಟ್ಟಾರು ಉಪಸ್ಥಿತರಿದ್ದರು.