Connect with us

ಇತರ

ಲಾವಣ್ಯ ಕೊಲೆ ಪ್ರಕರಣ: ಕತ್ತಿ ಖರೀದಿಸಿದ ಉಪ್ಪಿನಂಗಡಿ ಅಂಗಡಿಯಲ್ಲಿ ಆರೋಪಿ ಚೇತನ್ ಮಹಜರು

Published

on

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಚಲನ ಮೂಡಿಸಿದ್ದ ಲಾವಣ್ಯ ಕೊಲೆ ಪ್ರಕರಣದ ತನಿಖೆಯಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಕಳೆದ ಜುಲೈ 16ರಂದು ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಲಾವಣ್ಯ ಎಂಬ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದ ಆರೋಪಿ ಚೇತನ್, ಕೊಲೆಗೆ ಬಳಸಿದ್ದ ಮಾರಕಾಸ್ತ್ರವನ್ನು ಉಪ್ಪಿನಂಗಡಿಯ ಕೃಷಿ ಸಲಕರಣೆಗಳ ಮಾರಾಟ ಮಳಿಗೆಯಿಂದ ಖರೀದಿಸಿದ್ದ ಹಿನ್ನೆಲೆಯಲ್ಲಿ, ಬುಧವಾರ ಪೊಲೀಸರು ಸ್ಥಳ ಮಹಜರು ನಡೆಸಿದರು.

ತನಿಖಾಧಿಕಾರಿಗಳು ಆರೋಪಿ ಚೇತನ್‌ನ ಮುಖವನ್ನು ಕಪ್ಪು ಬಟ್ಟೆಯಿಂದ ಮುಚ್ಚಿ ಸ್ಥಳಕ್ಕೆ ಕರೆತಂದು, ಕತ್ತಿ ಖರೀದಿಸಿದ ಅಂಗಡಿಯಲ್ಲಿ ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದರು. ಈ ವೇಳೆ ಅಂಗಡಿಯ ಸಿಬ್ಬಂದಿಯೂ ತನಿಖೆಗೆ ಅಗತ್ಯ ಸಹಕಾರ ನೀಡಿದರು. ಪ್ರಾಥಮಿಕ ತನಿಖೆಯ ಪ್ರಕಾರ, ತನ್ನ ಏಕಮುಖ ಪ್ರೀತಿಯನ್ನು ಲಾವಣ್ಯ ಒಪ್ಪದ ಕಾರಣ, ಆರೋಪಿ ಪೂರ್ವಯೋಜಿತವಾಗಿ ಕೊಲೆ ಸಂಚು ರೂಪಿಸಿದ್ದ ಎನ್ನಲಾಗಿದೆ. ಜುಲೈ 15ರಂದು ಉಪ್ಪಿನಂಗಡಿಗೆ ಬಂದಿದ್ದ ಆತ, ಕೃಷಿ ಸಲಕರಣೆಗಳ ಮಳಿಗೆಯಲ್ಲಿ ಉದ್ದನೆಯ ಕತ್ತಿಯನ್ನು ಪರಿಶೀಲಿಸಿ ಅದರ ಬೆಲೆ ವಿಚಾರಿಸಿದ್ದ. ಬಳಿಕ ಸ್ವಲ್ಪ ಸಮಯದ ನಂತರ ಮತ್ತೆ ಅದೇ ಅಂಗಡಿಗೆ ಮರಳಿ ಬಂದು ಕತ್ತಿಯನ್ನು ಖರೀದಿಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಕತ್ತಿಯನ್ನು ಕಾಗದದಲ್ಲಿ ಸುತ್ತಿ ಪ್ಯಾಕ್ ಮಾಡಿದ ಬಳಿಕ, ಅದನ್ನು ಕೆಲಕಾಲ ಅಂಗಡಿಯಲ್ಲೇ ಬಿಟ್ಟು ಹೊರಗೆ ಹೋಗಿದ್ದ ಆರೋಪಿ, ನಂತರ ಮರಳಿ ಬಂದು ಕತ್ತಿಯನ್ನು ತೆಗೆದುಕೊಂಡು ಹೋಗಿರುವ ದೃಶ್ಯಗಳು ಅಂಗಡಿಯ ಸಿಸಿಟಿವಿಯಲ್ಲಿ ದಾಖಲಾಗಿವೆ. ಈ ಎಲ್ಲಾ ಮಾಹಿತಿಗಳನ್ನು ಆಧರಿಸಿ ಪೊಲೀಸರು ಪ್ರಕರಣದ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಮಹಜರು ವೇಳೆ ಸಂಗ್ರಹಿಸಿದ ಸಾಕ್ಷ್ಯಗಳು ಮುಂದಿನ ತನಿಖೆಗೆ ಪ್ರಮುಖವಾಗಲಿವೆ.

 
 

Continue Reading
Click to comment

Leave a Reply

Your email address will not be published. Required fields are marked *

Advertisement