Published
1 hour agoon
By
Akkare News
ಆರ್ಎಸ್ಎಸ್ (RSS) ಸಂಘಟನೆಯ ಕಾನೂನಾತ್ಮಕ ಸ್ಥಾನಮಾನ ಹಾಗೂ ನಿಧಿಯ ಮೂಲಗಳನ್ನು ಪ್ರಶ್ನಿಸಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಬರೆದಿರುವ ಪತ್ರದ ವಿವಾದ ಈಗ ಮತ್ತೊಂದು ಹಂತಕ್ಕೆ ತಲುಪಿದೆ. ಸಚಿವರ ಈ ನಡೆಗೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. “ಖರ್ಗೆ ಅವರು ಆರ್ಎಸ್ಎಸ್ ಕುರಿತು ದಾಖಲೆಗಳನ್ನು ಕೇಳುವ ಮೂಲಕ, ತಾವು ರಾಜ್ಯದ ಗೃಹ ಸಚಿವರಾಗಿದ್ದೇವೆ ಎಂಬುದನ್ನು ಜನರಿಗೆ ತೋರಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ” ಎಂದು ವ್ಯಂಗ್ಯವಾಡಿದ್ದಾರೆ. 
ಆರ್ಎಸ್ಎಸ್ಗೆ ಶತಮಾನದ ಇತಿಹಾಸವಿದೆ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರ ಬ್ಯಾಟ್ ಬೀಸಿರುವ ಬಸವರಾಜ ಬೊಮ್ಮಾಯಿ, “ಆರ್ಎಸ್ಎಸ್ ಸಂಘಟನೆಗೆ ಒಂದು ಶತಮಾನದ ಭವ್ಯ ಇತಿಹಾಸವಿದೆ. ಇದು ಸಂಪೂರ್ಣವಾಗಿ ಸ್ವದೇಶಿ ದೇಶಭಕ್ತರಿಂದ ಸ್ಥಾಪಿತವಾದ ಸಂಸ್ಥೆಯಾಗಿದ್ದು, ಇದನ್ನು ಎಲ್ಲೋ ನೋಂದಣಿ ಮಾಡಿಸಿ ಮಾನ್ಯತೆ ಪಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಮ್ಮ ದೇಶದಲ್ಲಿ ನೋಂದಾಯಿತ ಹಾಗೂ ನೋಂದಣಿಯಾಗದ ಎಷ್ಟೋ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಿಗೆ ಕಾನೂನಿನಲ್ಲೇ ಮುಕ್ತ ಅವಕಾಶವಿದೆ. ಆರ್ಎಸ್ಎಸ್ ಇಂದು ವಿಶ್ವದ ಅತಿದೊಡ್ಡ ಸ್ವಯಂಸೇವಾ ಸಂಘಟನೆಯಾಗಿ ಸಮಾಜ ಸೇವೆ ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಮಹತ್ವದ ಕೊಡುಗೆ ನೀಡುತ್ತಾ ಬಂದಿದೆ” ಎಂದಿದ್ದಾರೆ. 
ಠಾಣೆಗಳೇ ಅಕ್ರಮದ ಕೇಂದ್ರ ಕೆಲವು ಪೊಲೀಸ್ ಠಾಣೆಗಳೇ ಅಕ್ರಮ ಚಟುವಟಿಕೆಗಳ ಕೇಂದ್ರಗಳಾಗಿವೆ ಎಂಬ ಗಂಭೀರ ಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಕಾನೂನುಬಾಹಿರ ಕೆಲಸ ಮಾಡುವವರಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ಕುಕ್ಕರ್ ಬಾಂಬ್ ಸ್ಫೋಟದಂತಹ ಉಗ್ರ ಕೃತ್ಯಗಳಲ್ಲಿ ಭಾಗಿಯಾದವರು ಹಾಗೂ ಸಾರ್ವಜನಿಕವಾಗಿ ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಿದವರು ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ಓಡಾಡುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೊಮ್ಮಾಯಿ ಆಕ್ರೋಶ ಹೊರಹಾಕಿದ್ದಾರೆ. 

“ಆರ್ಎಸ್ಎಸ್ ದೇಶಭಕ್ತರಿಂದ ಸ್ಥಾಪಿತವಾಗಿ ದೇಶಭಕ್ತರಿಂದಲೇ ನಡೆಯುತ್ತಿರುವ ಸಂಘಟನೆಯಾಗಿದೆ. ಆದ್ದರಿಂದ, ತಮ್ಮ ರಾಜಕೀಯ ಲಾಭಕ್ಕಾಗಿ ಅದರ ಕಾರ್ಯಚಟುವಟಿಕೆಗಳನ್ನು ಪ್ರಶ್ನಿಸುವ ಯಾವುದೇ ಶಕ್ತಿಗೂ ಆರ್ಎಸ್ಎಸ್ನ್ನು ನಿಯಂತ್ರಿಸಲು ಸಾಧ್ಯವಿಲ್ಲ. ಪ್ರಿಯಾಂಕ್ ಖರ್ಗೆ ಅವರು ಹೈಕಮಾಂಡ್ ಓಲೈಕೆಯನ್ನು ಬದಿಗಿಟ್ಟು, ರಾಜ್ಯದಲ್ಲಿ ಶಾಂತಿ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದರೆ ಜನರಿಗೆ ಹೆಚ್ಚು ಉಪಯೋಗವಾಗಲಿದೆ” ಎಂದು ಸಲಹೆ ನೀಡಿದ್ದಾರೆ. 


