Published
16 hours agoon
By
Akkare News
ಕಾವೇರಿ ನೀರು ಹಂಚಿಕೆ ವಿವಾದದ ನಡುವೆಯೇ ತಮಿಳುನಾಡು ಸರ್ಕಾರ ನೆರೆಯ ರಾಜ್ಯಗಳಿಗೆ ಇನ್ನೊಂದು ಆಘಾತ ನೀಡಿದೆ. ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ತಮ್ಮ ರಾಜ್ಯದಿಂದ ಹೊರಕ್ಕೆ ರವಾನೆಯಾಗುವ ಪ್ರಮುಖ ನಿರ್ಮಾಣ ಸಾಮಗ್ರಿಗಳ ಸಾಗಣೆಯ ಮೇಲೆ ಕಠಿಣ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಅತ್ಯಂತ ಅಗತ್ಯವಾಗಿರುವ ಕಲ್ಲು, ಎಂ-ಸ್ಯಾಂಡ್ ಮತ್ತು ಜಲ್ಲಿ ಕಲ್ಲುಗಳನ್ನ ನೆರೆಯ ರಾಜ್ಯಗಳಿಗೆ ಸಾಗಿಸುವುದನ್ನ ಮೂರು ತಿಂಗಳ ಕಾಲ ಸಂಪೂರ್ಣವಾಗಿ ನಿಷೇಧಿಸಲಾಗಿದೆ. 
ಸಿಎಂ ವಿಜಯ್ ಸರ್ಕಾರದ ಸ್ಪಷ್ಟನೆ ಏನು? ರಾಜ್ಯದಲ್ಲಿ ನಗರೀಕರಣ ಹೆಚ್ಚುತ್ತಿದ್ದು, ಬೃಹತ್ ಮೂಲಸೌಕರ್ಯ ಯೋಜನೆಗಳು ಮತ್ತು ವಸತಿಗಳ ನಿರ್ಮಾಣ ಕಾರ್ಯಗಳು ಭರದಿಂದ ಸಾಗುತ್ತಿವೆ. ಈ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೇಡಿಕೆಗೆ ತಕ್ಕಂತೆ ಸ್ಥಳೀಯವಾಗಿ ತಮಿಳುನಾಡಿನ ಕ್ವಾರಿಗಳಿಂದ ಕಲ್ಲು ಮತ್ತು ಮರಳಿನ ಉತ್ಪನ್ನಗಳು ಲಭ್ಯವಾಗುತ್ತಿಲ್ಲ ಎಂದು ಸರ್ಕಾರ ತಿಳಿಸಿದೆ.
ಇಲ್ಲಿನ ಕ್ವಾರಿಗಳಿಂದ ನೆರೆಯ ರಾಜ್ಯಗಳಿಗೆ ಭಾರಿ ಪ್ರಮಾಣದಲ್ಲಿ ನಿರ್ಮಾಣ ಸಾಮಗ್ರಿಗಳು ರವಾನೆಯಾಗುತ್ತಿರುವುದರಿಂದ, ಸ್ಥಳೀಯವಾಗಿ ಕೃತಕ ಅಭಾವ ಸೃಷ್ಟಿಯಾಗಿದೆ. ಇದರಿಂದಾಗಿ ರಾಜ್ಯದೊಳಗೆ ನಿರ್ಮಾಣ ಸಾಮಗ್ರಿಗಳ ಬೆಲೆಗಳು ಗಗನಕ್ಕೇರಿವೆ ಎನ್ನಲಾಗಿದೆ. ಹೀಗಾಗಿ, ತಮಿಳುನಾಡಿನ ಸ್ಥಳೀಯ ಅಭಿವೃದ್ಧಿ ಯೋಜನೆಗಳು ಮತ್ತು ಸಾರ್ವಜನಿಕರ ಕಾಮಗಾರಿಗಳು ಸ್ಥಗಿತಗೊಳ್ಳದಂತೆ ನೋಡಿಕೊಳ್ಳಲು ಈ ತಾತ್ಕಾಲಿಕ ಹಾಗೂ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ಈ ನಿಷೇಧವನ್ನಾ ಸಮರ್ಥಿಸಿಕೊಂಡಿವೆ.
ಕರ್ನಾಟಕಕ್ಕೆ ಜಲ್ಲಿ ಸಾಗಣೆ ರದ್ದು: ಗಡಿ ಭಾಗದಲ್ಲಿ ಹೈ ಅಲರ್ಟ್ ನಿಷೇಧಾಜ್ಞೆಗಳು ಕಟ್ಟುನಿಟ್ಟಾಗಿ ಜಾರಿಗೆ ಬರುವಂತೆ ನೋಡಿಕೊಳ್ಳಲು ಗಡಿ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಮಿಳುನಾಡು ಸರ್ಕಾರ ಸ್ಪಷ್ಟ ಆದೇಶ ನೀಡಿದೆ. ಗಣಿಗಾರಿಕೆ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಗಡಿಭಾಗದ ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆಯನ್ನ ತೀವ್ರಗೊಳಿಸುವಂತೆ ಸೂಚಿಸಲಾಗಿದೆ.
ಕಾನೂನುಬಾಹಿರವಾಗಿ ಗಡಿ ದಾಟಿಸಿ ಕಲ್ಲು, ಜಲ್ಲಿ ಅಥವಾ ಎಂ-ಸ್ಯಾಂಡ್ ಸಾಗಿಸಲು ಯತ್ನಿಸಿದರೆ ‘ತಮಿಳುನಾಡು ಅಕ್ರಮ ಗಣಿಗಾರಿಕೆ ಸಾರಿಗೆ ನಿರೋಧಕ ಕಾಯ್ದೆ’ಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ. ನಿಯಮ ಉಲ್ಲಂಘಿಸುವ ವಾಹನಗಳನ್ನ ಜಪ್ತಿ ಮಾಡುವುದರ ಜೊತೆಗೆ ಭಾರಿ ಪ್ರಮಾಣದ ದಂಡ ವಿಧಿಸಲಾಗುವುದು ಎಂದು ಖಡಕ್ ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರು ನಿರ್ಮಾಣ ವಲಯದ ಮೇಲೆ ಪರಿಣಾಮ ತಮಿಳುನಾಡಿನ ಈ ನಿರ್ಧಾರದಿಂದ ಕರ್ನಾಟಕದ, ಅದರಲ್ಲೂ ವಿಶೇಷವಾಗಿ ರಾಜಧಾನಿ ಬೆಂಗಳೂರಿನ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ ವಲಯಕ್ಕೆ ದೊಡ್ಡ ಪೆಟ್ಟು ಬೀಳುವ ಆತಂಕ ಎದುರಾಗಿದೆ. ಗಡಿಭಾಗದ ಜಿಲ್ಲೆಗಳಾದ ಹೊಸೂರು ಹಾಗೂ ಕೃಷ್ಣಗಿರಿ ಭಾಗದಿಂದ ಬೆಂಗಳೂರಿನ ವಿವಿಧ ನಿರ್ಮಾಣ ಕಾಮಗಾರಿಗಳಿಗೆ ಪ್ರತಿನಿತ್ಯ ಸಾವಿರಾರು ಲಾರಿಗಳಲ್ಲಿ ಜಲ್ಲಿ, ಕಲ್ಲು ಮತ್ತು ಎಂ-ಸ್ಯಾಂಡ್ ಪೂರೈಕೆಯಾಗುತ್ತಿತ್ತು. ಇದೀಗ ಏಕಾಏಕಿ ಸಾಗಣೆ ನಿಂತುಹೋಗಿರುವುದರಿಂದ ನಗರದಲ್ಲಿ ನಿರ್ಮಾಣ ವೆಚ್ಚ ಹೆಚ್ಚಾಗುವ ಹಾಗೂ ಕಾಮಗಾರಿಗಳು ವಿಳಂಬವಾಗುವ ಸಾಧ್ಯತೆಯಿದೆ.
ಇತ್ತ ಕೇರಳದ ಮುಖ್ಯಮಂತ್ರಿ ಕೂಡ ಈ ನಿರ್ಧಾರದಿಂದ ಆತಂಕ ವ್ಯಕ್ತಪಡಿಸಿದ್ದಾರೆ. ಕನ್ಯಾಕುಮಾರಿ, ತಿರುನೆಲ್ವೇಲಿ ಮತ್ತು ತೆಂಕಾಸಿ ಜಿಲ್ಲೆಗಳಿಂದ ಕೇರಳದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳು, ವಿಝಿಂಜಂ ಬಂದರು ಮತ್ತು ವಲ್ಲಾರ್‌ಪಾಡಂ ಯೋಜನೆಗಳಿಗೆ ಕಚ್ಚಾ ಸಾಮಗ್ರಿಗಳು ಪೂರೈಕೆಯಾಗುತ್ತಿದ್ದವು. ರಾಷ್ಟ್ರೀಯ ಯೋಜನೆಗಳ ಹಿತದೃಷ್ಟಿಯಿಂದ ತಮ್ಮ ರಾಜ್ಯಕ್ಕೆ ಬರುವ ಸಾಮಗ್ರಿಗಳಿಗೆ ವಿಶೇಷ ವಿನಾಯಿತಿ ನೀಡುವಂತೆ ಕೋರಿ ಕೇರಳ ಸಿಎಂ, ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರಿಗೆ ಪತ್ರ ಬರೆದಿದ್ದಾರೆ.



